ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗ ನಿಯಂತ್ರಣ: ಡಾ. ಅನ್ನಪೂರ್ಣ ವಸ್ತ್ರದ

| Published : Feb 09 2024, 01:52 AM IST

ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗ ನಿಯಂತ್ರಣ: ಡಾ. ಅನ್ನಪೂರ್ಣ ವಸ್ತ್ರದ
Share this Article
  • FB
  • TW
  • Linkdin
  • Email

ಸಾರಾಂಶ

ಜನರಲ್ಲಿ ಕುಷ್ಠರೋಗದ ಬಗ್ಗೆ ಕಳಂಕ, ತಾರತಮ್ಯದಿಂದಾಗಿ ರೋಗಲಕ್ಷಣದ ಬಗ್ಗೆ ತಿಳಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಶಾಶ್ವತ ಅಂಗವಿಕತೆ ಉಂಟಾಗಬಹುದು. ಹಾಗಾಗಿ ಜನರಲ್ಲಿ ಕುಷ್ಠರೋಗದ ಕುರಿತು ಅರಿವು ಮೂಡಿಸಬೇಕು.

ಕಾರವಾರ:

ಕುಷ್ಠರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕುಷ್ಠರೋಗ ನಿಯಂತ್ರಿಸಿಲು ಸಾಧ್ಯವಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಡಾ. ಅನ್ನಪೂರ್ಣ ವಸ್ತ್ರದ ಹೇಳಿದರು.ಇಲ್ಲಿನ ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುಷ್ಠರೋಗ ವಿರೋಧಿ ದಿನದ ಅಂಗವಾಗಿ ಗುರುವಾರ ಆಯೋಜಿಸಿದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಕುಷ್ಠರೋಗದ ಬಗ್ಗೆ ಕಳಂಕ, ತಾರತಮ್ಯದಿಂದಾಗಿ ರೋಗಲಕ್ಷಣದ ಬಗ್ಗೆ ತಿಳಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಶಾಶ್ವತ ಅಂಗವಿಕತೆ ಉಂಟಾಗಬಹುದು. ಹಾಗಾಗಿ ಜನರಲ್ಲಿ ಕುಷ್ಠರೋಗದ ಕುರಿತು ಅರಿವು ಮೂಡಿಸಬೇಕು ಎಂದರು.ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಂಕರರಾವ್ ಮಾತನಾಡಿ, ಕಳಂಕ ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ ಎಂಬ ಘೋಷವಾಕ್ಯದೊಂದಿಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವು ದೇಶಾದ್ಯಂತ ಫೆ. 13ರ ವರೆಗೆ ನಡೆಯಲಿದ್ದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಕಾಣಿಸುವುದು, ಕೈಕಾಲುಗಳಲ್ಲಿ ಜೋಮು ಹಿಡಿದ ಸ್ಪರ್ಶ ಜ್ಞಾನವಿಲ್ಲದಿರುವುದು, ಮುಖ ಅಥವಾ ಕೈ ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು, ಗಂಟುಗಳು, ಕಣ್ಣಿನ ರೆಪ್ಪೆ ಮುಚ್ಚಲು ಅಸಮರ್ಥತೆ, ಕೈ ಅಥವಾ ಕಾಲುಗಳ ಬೆರಳು ಮಡಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಅಂಗೈ ಅಥವಾ ಪಾದಗಳಲ್ಲಿ ಶೀತ, ಬಿಸಿ ಸಂವೇದನೆ ನಷ್ಟವಾಗಿರುವುದು, ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಲಕ್ಷಣಗಳು ಇದರ ಪ್ರಮುಖ ಲಕ್ಷಣವಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಪ್ರಸ್ತುತ 96 ಕುಷ್ಠರೋಗ ಪ್ರಕರಣಗಳಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕುಷ್ಠರೋಗ ಲಕ್ಷಣಗಳು ಕಂಡುಬಂದವರನ್ನು ಗುರುತಿಸಿ ಆರಂಭಿಕ ಹಂತದಲ್ಲಿ ಬಹು ಔಷಧಿ ಚಿಕಿತ್ಸೆ ಮೂಲಕ 6 ಅಥವಾ 12 ತಿಂಗಳ ಸೂಕ್ತ ಚಿಕಿತ್ಸೆ ನೀಡಿ ಮುಂದೆ ಆಗುವ ಶಾಶ್ವತ ಅಂಗವೀಕಲತೆ ತಡೆಗಟ್ಟಬಹುದು ಎಂದು ಅಭಿಪ್ರಾಯಿಸಿದರು.ಚರ್ಮರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ರುತಿ ಎಚ್.ಎನ್. ಉಪನ್ಯಾಸ ನೀಡಿ, ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಿ, ರೋಗದಿಂದ ಬಾಧಿತರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗೌರಯುತವಾಗಿ ಬದುಕಲು ಅವಕಾಶ ನೀಡಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ರೆಡ್ ಕ್ರಾಸ್ ಸಂಚಾಲಕ ಡಾ. ನವೀನ ದೇವರಭಾವಿ, ಮನೋವೈದ್ಯ ಡಾ. ಸುವಾಸ, ಉಪನ್ಯಾಸಕ ಶಿವಕುಮಾರ ನಾಯ್ಕ, ಡಿಪಿಸಿ ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಕನ್ನಕ್ಕನವರ ಇದ್ದರು.