ಸಾರಾಂಶ
ಗದಗ ಸ್ಥಳೀಯ ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಗದಗ: ವಿದ್ಯಾರ್ಥಿಗಳು ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಬಳಕೆ ನಿಯಂತ್ರಿಸಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಸಿ.ಎಂ. ಹೇಳಿದರು.
ಸ್ಥಳೀಯ ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಿದ್ಯಾರ್ಥಿಗಳಲ್ಲಿ ಉಂಟಾಗುವ ಏಕಾಗ್ರತೆ ಕೊರತೆ, ನೆನಪು ಹಾರುವಿಕೆ ಹಾಗೂ ಆಸಕ್ತಿ ಇಲ್ಲದಿರುವಿಕೆ ಮುಂತಾದ ಮಾನಸಿಕ ಗೊಂದಲಗಳಿಗೆ ಕಾರಣ ಮತ್ತು ಪರಿಹಾರಗಳನ್ನು ತಿಳಿಸುತ್ತಾ, ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ, ಆರೋಗ್ಯಕರ ಮತ್ತು ಸಮೃದ್ಧ ಜೀವನ ನಡೆಸಲು ಮಾನಸಿಕ ಆರೋಗ್ಯ ಮುಖ್ಯ. ಏಕೆಂದರೆ ಮಾನಸಿಕ ಸ್ಥಿರತೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದರು.ಪ್ರಾಚಾರ್ಯ ಎಂ.ಎಂ. ಬುರಡಿ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವಂತೆ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಬೆಳೆಸಿಕೊಳ್ಳಲು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಮನೋವೈದ್ಯ ಸೋಮಶೇಖರ ಬಿಜ್ಜಳ ಮಾತನಾಡಿ, ಶಾರೀರಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಸ್ವಾಸ್ಥ್ಯವೇ ಆರೋಗ್ಯ ಎಂದರು.ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಮಾತನಾಡಿದರು. ಗುರುರಾಜ ಬಿ. ಗೌರಿ, ಆರ್.ಎಚ್. ಪಾಟೀಲ, ರೂಪಶೇನ್ ಚವ್ಹಾಣ ಇದ್ದರು. ಮಂಜುಶ್ರೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ರಾಜೇಂದ್ರ ಬಸರೀಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಆನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.