ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೌಟುಂಬಿಕ ದೌರ್ಜನ್ಯ ಕಾಯ್ದೆಯಿಂದಾಗಿ ಮಹಿಳೆಯರ ರಕ್ಷಣೆ ಮತ್ತು ಕಾಯ್ದೆಯು ಸಿವಿಲ್ ಮತ್ತು ಕ್ರಿಮಿನಲ್ ನಿಬಂಧನೆಗಳನ್ನು ಹೊಂದಿದ್ದರೂ ಸಂತ್ರಸ್ಥ ಮಹಿಳೆಯರು 60 ದಿನಗಳಲ್ಲಿ ನಾಗರೀಕ ಪರಿಹಾರಗಳನ್ನು ಪಡೆದುಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಗರದ ಆಲ್ಕೊಳದ ಮಲ್ಟಿಪರ್ಪಸ್ ಸೋಶಿಯಲ್ ಸೊಸೈಟಿ ಸಭಾಂಗಣದಲ್ಲಿ ಗುರುವಾರ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸುರಕ್ಷತಾ ಕಾಯ್ದೆ-2005ರ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಎಂಬ ವಿಷಯದ ಕುರಿತು ವಿವಿಧ ತಾಲೂಕುಗಳ ಸಂಬಂಧಿತ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರು ತನ್ನೊಂದಿಗೆ ಕೌಟುಂಬಿಕ ಸಂಬಂಧ ಹೊಂದಿರುವ ಯಾವುದೇ ಪುರುಷ ವಯಸ್ಕ ಅಪರಾಧಿಯ ವಿರುದ್ಧ ಈ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬಹುದಾಗಿದೆ.ಬಹುಮುಖ್ಯವಾಗಿ ಈ ಕಾಯ್ದೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಇಲಾಖೆಗಳ ತಾಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಅರಿವು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ. ಪ್ರಕರಣ ದಾಖಲಿಸುವ ಮುನ್ನ ವಿಷಯದ ಪ್ರಾಥಮಿಕ ಮಾಹಿತಿಯನ್ನು ಹೊಂದಿದ್ದು, ಪ್ರಕರಣ ಮತ್ತು ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು. ಪ್ರಕರಣದ ಮುಕ್ತಾಯದ ನಂತರವೂ ಸಂತ್ರಸ್ಥ ವ್ಯಕ್ತಿಗೆ ನ್ಯಾಯ ಕೊಡಿಸಬೇಕಾದ ಬಗ್ಗೆಯೂ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.
ಡಿಎಚ್‌ಒ ಡಾ.ಕೆ.ಎಸ್.ನಟರಾಜ್ ಮಾತನಾಡಿ, ಕ್ಷುಲ್ಲಕ ಹಾಗೂ ಹೊಂದಾಣಿಕೆಯ ಕಾರಣಗಳಿಂದಾಗಿ ಅನೇಕ ಪ್ರಕರಣಗಳಲ್ಲಿ ಕೌಟುಂಬಿಕ ಜಗಳ ನಡೆಯುತ್ತಿವೆ. ಬಹುಸಂಖ್ಯಾತ ಮಹಿಳೆಯರು ಕೌಟುಂಬಿಕ ಹಿಂಸೆ ಅನುಭವಿಸುವಂತಾಗಿದೆ. ವರದಕ್ಷಿಣೆ, ಆಸ್ತಿ ಹಂಚಿಕೆ, ಮತ್ತಿತರ ಕಾರಣಗಳಿಂದಾಗಿ ಮಹಿಳೆಯರಿಗೆ ಸಕಾಲಕ್ಕೆ ಸೂಕ್ತ ಸಹಾಯಹಸ್ತ ದೊರೆಯದೇ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.ಪ್ರತಿ ಕುಟುಂಬದಲ್ಲಿ ಹೊಂದಾಣಿಕೆ ಮತ್ತು ನಂಬಿಕೆ ಅಗತ್ಯ. ಅಲ್ಲದೇ ಕುಟುಂಬದಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಪರಸ್ಪರರಲ್ಲಿ ಮುಕ್ತ ಸಮಾಲೋಚನೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಚರ್ಚೆ, ಸಮಾಲೋಚನೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಮಹಿಳಾ ಪೊಲೀಸ್ ಇನ್ಸೆಪೆಕ್ಟರ್ ಕವಿತಾ ಸೇರಿದಂತೆ ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.