ತಾಲೂಕಿನ ಕೊರಟಿ ತಿರುಮಲ ಪಾಳ್ಯ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳ ಪರ ಮಹೋತ್ಸವವನ್ನು ನಡೆಸುವ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ವಿವಾದ ಸಂಬಂಧ ತಹಸೀಲ್ದಾರ್ ಕರೆದಿದ್ದ ಶಾಂತಿ ಸಭೆ ವಿಫಲವಾಗಿದೆ.
ಎರಡೂ ಗುಂಪು ಒಂದಾಗುವವರೆಗೆ ಕಾರ್ಯಕ್ರಮ ರದ್ದು: ತಹಸೀಲ್ದಾರ್ ಕರಿಯ ನಾಯಕ್
ಕನ್ನಡಪ್ರಭ ವಾರ್ತೆ ಕುಣಿಗಲ್ತಾಲೂಕಿನ ಕೊರಟಿ ತಿರುಮಲ ಪಾಳ್ಯ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳ ಪರ ಮಹೋತ್ಸವವನ್ನು ನಡೆಸುವ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ವಿವಾದ ಸಂಬಂಧ ತಹಸೀಲ್ದಾರ್ ಕರೆದಿದ್ದ ಶಾಂತಿ ಸಭೆ ವಿಫಲವಾಗಿದೆ.
ಕಾಂಗ್ರೆಸ್ ಬೆಂಬಲಿತರ ಗುಂಪು ಗ್ರಾಮದಲ್ಲಿ ಪರ ಮಹೋತ್ಸವ ಮಾಡುವ ಸಂಬಂಧ ತಯಾರಿ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಬಣ ಪರ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ತಹಸಿಲ್ದಾರ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ತಹಸಿಲ್ದಾರ್ ಕರಿಯ ನಾಯಕ ಎರಡು ಗುಂಪುಗಳ ನಡುವೆ ಮಾತುಕತೆ ನಡೆಸುವ ಪ್ರಯತ್ನ ಮಾಡಿದರೂ ಅದು ವಿಫಲವಾಯಿತು.ನಂತರ ಮಾತನಾಡಿದ ತಹಸೀಲ್ದಾರ್ ಕರಿಯ ನಾಯಕ್ ದೇವರ ಕಾರ್ಯ, ಹಬ್ಬ ಮಾಡುವುದು ಎಲ್ಲರ ಮನಸ್ಸು ಒಂದಾಗಲಿ, ಭಾವನೆಗಳು ಬೆರೆಯಲಿ ಎನ್ನುವ ಕಾರಣಕ್ಕೆ. ಆದರೆ ಅದರಿಂದ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂಬುವುದಾದರೆ ಹಬ್ಬ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಗುಂಪಿನವರು ಒಟ್ಟಾಗಿ ಬಂದಾಗ ಮಾತ್ರ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ವಾದ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಹುಲಿಯೂರುದುರ್ಗ ಸಿಪಿಐ ನವೀನ್ ಗೌಡ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಈ ಹಿಂದೆ ಎನ್‌ಡಿಎ ಬಣ ಗ್ರಾಮದ ಬಸವಣ್ಣದೇವರ ಹಬ್ಬ ಆಚರಣೆ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ಪೊಲೀಸರು ಅವಕಾಶ ನೀಡಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಬಣ ಕಾರಣ ಎಂದು ಪರಸ್ಪರ ಆರೋಪಿಸಿದರು. ಸಭೆಯಲ್ಲಿ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ಸೂಕ್ಷ್ಮತೆ ಅರಿತ ತಹಸೀಲ್ದಾರ್ ದೇವಾಲಯದಲ್ಲಿ ಪೂಜೆ ಅಭಿಷೇಕ ಅಲಂಕಾರ ಹೊರತುಪಡಿಸಿ ಉತ್ಸವ ಮೆರವಣಿಗೆ ಕಾರ್ಯಗಳನ್ನು ಮಾಡದಂತೆ ಸೂಚಿಸಿದರು . -------------------
16 ಕೆಜಿಎಲ್ 1 : ಶಾಂತಿ ಸಭೆ ನಡೆಸುತ್ತಿರುವ ಪೊಲೀಸರು ಮತ್ತು ತಹಸೀಲ್ದಾರ್.