ಸಾರಾಂಶ
ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ಮಾರ್ಚ್‌ನಲ್ಲಿ ಟ್ರೈನ್ ಆಪರೇಟರ್ಸ್‌ಗಳ ಹುದ್ದೆಗಾಗಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಕನ್ನಡಿಗರಿಗೆ ಉದ್ಯೋಗ ತಪ್ಪಿಸುವ ಅಂಶ ಸೇರ್ಪಡೆ ಮಾಡಿ ಬಳಿಕ ಹಿಂಪಡೆದಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮವು ಈಗ ‘ಹಳದಿ’ ಮತ್ತು ‘ಗುಲಾಬಿ’ ಮಾರ್ಗಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ‘ಟ್ರೈನ್ ಆಪರೇಷನ್ ಸರ್ವೀಸ್’ ಹೆಸರಲ್ಲಿ ನೇಮಕಾತಿಗೆ ಮುಂದಾಗಿದೆ. ಇದನ್ನು ಸಂಸ್ಥೆಯ ಹಿಂಬಾಗಿಲ ಕಳ್ಳಾಟ ಎಂದು ಆಕ್ಷೇಪಿಸಿರುವ ಮೆಟ್ರೋ ನೌಕರ ವಲಯ, ಈ ನಿರ್ಧಾರ ಪ್ರಯಾಣಿಕರ ಸುರಕ್ಷತೆಗೂ ಅಪಾಯ ತರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಮೆಟ್ರೋ ಮೊದಲ ಹಂತದಲ್ಲಿ ಬಿಎಂಆರ್‌ಸಿಎಲ್ ನೇರವಾಗಿ ಟ್ರೈನ್ ಆಪರೇಟರ್ಸ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಆದರೆ, ಹೌಸ್ ಕೀಪಿಂಗ್, ಭದ್ರತಾ ಸಿಬ್ಬಂದಿ ಹೊರತುಪಡಿಸಿ ಇದೇ ಮೊದಲ ಬಾರಿಗೆ ಲೊಕೋಪೈಲೆಟ್ ಹುದ್ದೆಯನ್ನೂ ಹೊರಗುತ್ತಿಗೆ (ಖಾಸಗಿ) ಮೂಲಕ ನೇಮಿಸಿಕೊಳ್ಳಲು ಮುಂದಾಗಿದೆ. ಮೆಟ್ರೋ 2ನೇ ಹಂತದ ಮಾರ್ಗಕ್ಕಾಗಿ ಟ್ರೈನ್ ಆಪರೇಷನ್ ಸರ್ವೀಸ್ ಒದಗಿಸುವಂತೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಇದರಲ್ಲಿ ಲೊಕೋಪೈಲೆಟ್, ಸ್ಟೇಷನ್ ಆಪರೇಟರ್ ಸೇರಿ ಇತರ ಹುದ್ದೆಗಳಿವೆ. ಶೀಘ್ರ ಆರಂಭವಾಗುವ ನಿರೀಕ್ಷೆಯ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ, ಮುಂದಿನ ವರ್ಷಾಂತ್ಯಕ್ಕೆ ಶುರುವಾಗುವ ಸಾಧ್ಯತೆಯ ಕಾಳೇನ ಅಗ್ರಹಾರ-ನಾಗವಾರದ ‘ಗುಲಾಬಿ’ ಮಾರ್ಗಕ್ಕಾಗಿ 5 ವರ್ಷಕ್ಕೆ ಈ ಗುತ್ತಿಗೆ ಕರೆಯಲಾಗಿದೆ. ಈಗಾಗಲೇ ಹೈದ್ರಾಬಾದ್, ಚೆನ್ನೈನಲ್ಲಿ ಈ ಮಾದರಿಯಲ್ಲಿ ಲೋಕೋಪೈಲೆಟ್ ನೇಮಕ ಆಗುತ್ತಿದೆ.ಹೊಣೆಗಾರಿಕೆಯಿಂದ ನುಣುಚಿಕೊಳ್ಳವ ಯತ್ನ?:
ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಟ್ರೈನ್ ಆಪರೇಟರ್ಸ್‌ಗಳಿಂದ ಕಾರ್ಯಾಚರಣೆ, ಅಪಘಾತ ಸೇರಿ ಇನ್ನಿತರ ಗಂಭೀರ ಲೋಪವಾದರೂ ಬಿಎಂಆರ್‌ಸಿಎಲ್ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಹುದು. ಬಿಎಂಆರ್‌ಸಿಎಲ್ ತಾನು ಸಾರ್ವಜನಿಕರಿಗಾದ ಸಮಸ್ಯೆಗೆ ಉತ್ತರದಾಯಿತ್ವ ತೋರದಿರಬಹುದು. ಜತೆಗೆ ಗುತ್ತಿಗೆ ಕಂಪನಿಯೂ ಜವಾಬ್ದಾರಿ ತೋರಿಸದಿರಬಹುದು. ಆಪರೇಟರ್ಸ್‌ಗಳ ತರಬೇತಿ, ಸುರಕ್ಷತಾ ವಿಚಾರಗಳಲ್ಲಿ ಗಂಭೀರ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಸರ್ಕಾರಿ ಮಾನದಂಡ ಅನುಸರಣೆ ಆಗದಿರುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘ ಆಕ್ಷೇಪಿಸಿದೆ.ಹೈದ್ರಾಬಾದ್‌ನಲ್ಲಿ ವಿಫಲ:
ಜತೆಗೆ ಹೈದ್ರಾಬಾದ್‌ನಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನಿಯೋಜಿಸಿಗೊಂಡ ಲೋಕೋಪೈಲೆಟ್‌ಗಳಿಗೆ ವೇತನ ಸೇರಿ ಇನ್ನಿತರ ಸಮಸ್ಯೆ ಉಂಟಾಗಿದೆ. ಅಲ್ಲಿ ವಿಫಲವಾದ ಈ ವ್ಯವಸ್ಥೆಯನ್ನು ನಮ್ಮ ಮೆಟ್ರೋ ಅನುಸರಣೆ ಮಾಡುತ್ತಿರುವುದು ಯಾಕೆ ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ಪ್ರಶ್ನಿಸಿದ್ದಾರೆ.ತಾತ್ಕಾಲಿಕ; ಬಿಎಂಆರ್‌ಸಿಎಲ್
ಈ ಬಗ್ಗೆ ಉತ್ತರಿಸಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ಸದ್ಯದ ತರಬೇತುಗೊಂಡ ಚಾಲಕರ ಕೊರತೆ ನೀಗಿಸಲು ಹಾಗೂ ಹೊಸ ಮಾರ್ಗಗಳ ಆರಂಭಕ್ಕೆ ಸಮಸ್ಯೆ ಆಗದಿರಲು ತಾತ್ಕಾಲಿಕವಾಗಿ ಈ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.ನೇಮಕಾತಿ ಟೆಂಡರ್ ರದ್ದಿಗೆ
ಮೆಟ್ರೋ ನೌಕರರ ಒತ್ತಾಯ‘ಹಳದಿ’ ಮತ್ತು ‘ಗುಲಾಬಿ’ ಮಾರ್ಗಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ಟ್ರೈನ್ ಆಪರೇಷನ್ ಸರ್ವೀಸ್ ನೇಮಕಾತಿ ಟೆಂಡರ್‌ನ್ನು ತಕ್ಷಣ ರದ್ದುಪಡಿಸಬೇಕು. ಮೊದಲಿನಂತೆ ಬಿಎಂಆರ್‌ಸಿಎಲ್ ನೇರವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ನಮ್ಮ ಮೆಟ್ರೋ ನೌಕರರ ವಲಯ ಒತ್ತಾಯಿಸುತ್ತಿದೆ.
ಕಳೆದ ವರ್ಷ ರಾಜಾಜಿನಗರದ ಬಳಿ ತಾಂತ್ರಿಕ ದೋಷ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಲೋಕೋಪೈಲೆಟ್ ಬೋಗಿಗಳ ಬಾಗಿಲನ್ನೂ ತೆರೆಯದಿದ್ದರಿಂದ ಪ್ರಯಾಣಿಕರು ಕೆಲಕ್ಷಣ ಗಾಬರಿಗೊಂಡಿದ್ದರು. ಇಂತಹ ಘಟನೆಗೆ ನೇರವಾಗಿ ಬಿಎಂಆರ್‌ಸಿಎಲ್‌ನ್ನು ಚಾಲಕರ ತಪ್ಪಿಗೆ ಹೊಣೆ ಆಗಿಸಬಹುದು. ಅವರ ತರಬೇತಿ ಅವಧಿ, ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪಕ್ಕೆ ಗುರಿ ಮಾಡಬಹುದು. ಆದರೆ, ಹೊರಗುತ್ತಿಗೆಯಲ್ಲಿ ನಿಖರವಾಗಿ ತಪ್ಪಿನ ಹೊಣೆ ಹೊರಿಸಲು ಸಾಧ್ಯವೆ? ಬಿಎಂಆರ್‌ಸಿಎಲ್ ಹಾಗೂ ಗುತ್ತಿಗೆ ಕಂಪನಿ ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳಲು ಇದು ದಾರಿಯಾಗಬಹುದು. ಇದಕ್ಕೆ ಪರಿಹಾರವೇನು ಎಂದು ನೌಕರರ ಸಂಘಟನೆ ಕೇಳುತ್ತಿದೆ.ಕನ್ನಡಿಗರಿಗೆ ಹುದ್ದೆ ಸಿಗುತ್ತಾ?
ಹೊರಗುತ್ತಿಗೆಯಲ್ಲಿ ಕನ್ನಡಿಗರಿಗೆ ಹುದ್ದೆ ಸಿಗುತ್ತಾ? ಎಂಬ ಪ್ರಶ್ನೆಗೆ ಎಲ್ಲಿಯೂ ಉತ್ತರವಿಲ್ಲ. ಈ ಟೆಂಡರ್ ಆದಲ್ಲಿ ಟ್ರೈನ್ ಆಪರೇಟರ್ಸ್ ಹುದ್ದೆಯನ್ನು ಹೊರಗುತ್ತಿಗೆ ಪಡೆಯುವ ಕಂಪನಿ ಭರ್ತಿಮಾಡುತ್ತದೆ. ಆಗ ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗುತ್ತದೆ ಎನ್ನಲಾಗಲ್ಲ. ಅಲ್ಲದೆ, ಈ ಹಿಂದೆ ಬಿಎಂಆರ್‌ಸಿಎಲ್ ಪ್ರಶ್ನಿಸಿದಂತೆ ಹೊರಗುತ್ತಿಗೆ ಕಂಪನಿಯನ್ನು ಪ್ರಶ್ನಿಸುವುದು ಹೇಗೆ ಎಂದು ಕನ್ನಡಿಗ ನೌಕರರು ಕೇಳುತ್ತಾರೆ.ಹೊರಗುತ್ತಿಗೆ ಟ್ರೈನ್ ಆಪರೇಟರ್ಸ್ ನೇಮಕ ಅಪಾಯಕಾರಿ. ಸಂಭಾವ್ಯ ದುರಂತಗಳಲ್ಲಿ ಬಿಎಂಆರ್‌ಸಿಎಲ್ ತನ್ನ ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಈ ರೀತಿಯ ನಿರ್ಣಯ ಮಾಡಿದ್ದು, ತಕ್ಷಣ ಟೆಂಡರ್ ರದ್ದುಮಾಡಿ, ಮೊದಲಿನಂತೆ ತಾನೇ ನೇರವಾಗಿ ಟ್ರೈನ್ ಆಪರೇಟರ್ ನೇಮಿಸಬೇಕು.
- ಸೂರ್ಯನಾರಾಯಣಮೂರ್ತಿ ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ