ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿಲುವಿಗೆ ಎಚ್.ಆಂಜನೇಯ ಆಕ್ಷೇಪ । ಸಿಎಂ ಮಧ್ಯಪ್ರವೇಶಕ್ಕೆ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪರಿಶಿಷ್ಟರಲ್ಲಿ ಒಳ ಮೀಸಲು ವಿಷಯ ಇದೀಗ ಹಾಲಿ ಹಾಗೂ ಮಾಜಿ ಸಚಿವರ ನಡುವೆ ಅಸಮಾಧಾನ ಸೃಷ್ಠಿಗೆ ಕಾರಣವಾಗಿದ್ದು ವಿಶ್ವವಿದ್ಯಾಲಯಗಳಲ್ಲಿನ ವಿಷಯವಾರು ಹುದ್ದೆಗಳ ನೇಮಕಾತಿ ಬದಲು ವಿವಿಯನ್ನೇ ಘಟಕವಾಗಿ ಪರಿಗಣಿಸಿ ನೇಮಕಾತಿ ಮಾಡುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ನಿಲುವಿಗೆ ಮಾಜಿ ಸಮಾಜ ಕಲ್ಯಾಮ ಸಚಿವ ಎಚ್.ಆಂಜನೇಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನಂತೆಯೇ ವಿಷಯವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು. ಸಚಿವ ಮಹಾದೇವಪ್ಪ ಅವರು ತಮ್ಮ ನಿಲುವು ಬದಲಾಯಿಸಬೇಕು. ಮುಖ್ಯಮಂತ್ರಿಗಳು ತಕ್ಷವೇ ಮಧ್ಯೆ ಪ್ರವೇಶ ಮಾಡಿ ಹಳೆಯ ವ್ಯವಸ್ಥೆ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಒಳ ಮೀಸಲಾತಿ ಹೋರಾಟಕ್ಕೆ ಕರ್ನಾಟಕದಲ್ಲಿ ಅದರದ್ದೇ ಆದ ಇತಿಹಾಸ ಇದೆ. ಸರ್ಕಾರ ಜಾರಿಗೊಳಿಸಿದರೂ ಅನುಷ್ಠಾನದ ವಿಷಯದಲ್ಲಿ ಕಂಟಕಗಳು ಎದುರಾಗುತ್ತಿವೆ. ಮೀಸಲು ವರ್ಗೀಕರಣ ಮಾಡಿದಾಗ ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಸಮುದಾಯವನ್ನು ಎ ಗುಂಪಿಗೆ ಸೇರಿಸಿ, ಉಳಿದ ಎರಡು ಗುಂಪುಗಳನ್ನು ಬಿ ಮತ್ತು ಸಿ ಎಂದು ನಮೂದಿಸಲಾಗಿತ್ತು. ಸರ್ಕಾರದ ನೇಮಕಾತಿ ಪ್ರಕ್ರಿಯೆ ಆರಂಭವಾದಲ್ಲಿ ಮೊದಲು ಎ ಗುಂಪಿಗೆ ಪ್ರಾತಿನಿದ್ಯ ನೀಡಬೇಕು. ನಂತರದಲ್ಲಿ ಬಿ ಮತ್ತು ಸಿ ಗುಂಪುಗಳಿಗೆ ಮನ್ನಣೆ ದೊರೆಯಲಿದೆ. ಒಳ ಮೀಸಲು ವರ್ಗೀರಣರ ಆಶಯ ಇದೇ ಆಗಿತ್ತು. ಆದರೆ ಇಲ್ಲೂ ಕೂಡಾ ಮಾದಿಗರಿಗೆ ಅನ್ಯಾಯ ಮಾಡುವ ಸಂಚುಗಳು ರೂಪಿತವಾದಂತೆ ಕಾಣಿಸುತ್ತಿದೆ ಎಂದು ಆಂಜನೇಯ ತೀವ್ರ ಅಸಮಾಧಾನ ಹೊರ ಹಾಕಿದರು.ಮಾದಿಗ ಸಮುದಾಯದವರು ನಾಲ್ಕಾರು ಹುದ್ದೆ ಹೆಚ್ಚು ಪಡೆಯುತ್ತಾರೆಂಬ ಕೆಲವರ ಮಾತುಗಳಿಗೆ ಇಂಬು ನೀಡಿರುವ ಸಚಿವ ಮಹದೇವಪ್ಪ ವಿವಿಯನ್ನೇ ಘಟಕವನ್ನಾಗಿ ಪರಿಗಣಿಸುವ ತೀರ್ಮಾನಕ್ಕೆ ಬಂದಿದ್ದು ಮಾದಿಗರಿಗೆ ಅನ್ಯಾಯವಾಗುತ್ತದೆ. ವಿಶ್ವವಿದ್ಯಾನಿಲಯದ ಹುದ್ದೆಗಳನ್ನು ವಿಷಯವಾರು ಆಯ್ಕೆ ಮಾಡದೆ, ಒಟ್ಟುಗೂಡಿಸಿ ಘಟಕವನ್ನಾಗಿಸಿದರೆ ಒಳ ಮೀಸಲು ಆಶಯಕ್ಕೆ ಧಕ್ಕೆಯಾಗುತ್ತದೆ. ಯಾರದೋ ಮಾತು ಕೇಳಿ ಸಚಿವ ಮಹದೇವಪ್ಪ ಮೀಸಲು ನಿಯಮ ಬದಲಾವಣೆ ಮಾಡಿದ್ದಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿದಂತಾಗುತ್ತದೆಯೇ ಎಂದು ಆಂಜನೇಯ ಪ್ರಶ್ನಿಸಿದರು. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ನಡೆಯಾಗಿದೆ ಎಂದರು.
ಮಾದಿಗ ಸಮುದಾಯಕ್ಕೆ ಅನಾದಿ ಕಾಲದಿಂದಲೂ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಎ, ಬಿ, ಸಿ ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ಮಾಡದೆ ಇಡೀ ಕಾಯ್ದೆಯ ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಚಿವ ಮಹದೇವಪ್ಪ ಅವರಿಗೆ ಒಳ ಮೀಸಲು ವಿಚಾರದಲ್ಲಿ ಕಾಳಜಿಗಳಿದ್ದರೆ ವಿವಿಗಳಲ್ಲಿ ಯಾವ ಜಾತಿಯವರು ಎಷ್ಟೆಷ್ಟು ಪ್ರಮಾಣದಲ್ಲಿ ಇದ್ದಾರೆ ಎಂಬುದ ಬಹಿರಂಗಗೊಳಿಸಲಿ ಎಂದು ಆಂಜನೇಯ ಆಗ್ರಹಿಸಿದರು.
ಮಾದಿಗರ ವಿರೋಧಿ ನೀತಿ ನಾವು ಸಹಿಸುವುದಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದರು. ಮುಖ್ಯಮಂತ್ರಿಗಳು ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಆಂದ್ರ, ತೆಲಂಗಾಣ ಮಾದರಿಯಲ್ಲಿ ಜಿಲ್ಲಾವಾರು ಜನಸಂಖ್ಯೆ ಆಧರಿಸಿ ಒಳಮೀಸಲಾತಿ ಕೊಡಬೇಕು ಎಂದು ಎಚ್.ಆಂಜನೇಯ ಆಗ್ರಹ ಮಾಡಿದರು.
ವಿದ್ಯಾರ್ಥಿ ನಾಯಕ ಎಂ.ಅಜಿತ್ ಮಾತನಾಡಿ, ಪ್ರತಿ ವಿಶ್ವವಿದ್ಯಾನಿಲಯದಲ್ಲಿ 20 ರಿಂದ 22 ವಿಭಾಗ ಇರುತ್ತವೆ. ಎಲ್ಲದರಲ್ಲೂ ಮೂರ್ನಾಲ್ಕು ಹುದ್ದೆ ಬಂದರೆ, ಪ್ರತಿ ಮೊದಲ ಸೀಟ್ ಎ ಗುಂಪಿನ ಮಾದಿಗ ಸಮುದಾಯಕ್ಕೆ ಸಿಗುತ್ತದೆ. ಈ ಅವಕಾಶ ತಪ್ಪಿಸುವ ಕಾರಣಕ್ಕೆ ಘಟಕವನ್ನಾಗಿ ಪರಿಗಣಿಸುವ ನಿಲುವು ಹೊಂದಲಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಅನಿಲ್ ಕೋಟಿ, ವಕೀಲ ರವೀಂದ್ರ ಇದ್ದರು.