ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೆ.27ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ವೇದಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೆ.27ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ವೇದಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ.ಕನೇರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದ್ದು, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಮಠಾಧೀಶರು, ಶರಣರು ಮತ್ತು ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ಅನುಗುಣವಾಗಿ ಆಸನ ವ್ಯವಸ್ಥೆ, ಕುಡಿಯುವ ನೀರು, ವಾಹನ ನಿಲುಗಡೆ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.ಸಮಾವೇಶಕ್ಕೂ ಮುನ್ನ ಸಂಜೆ 4 ಗಂಟೆಗೆ ಜಗತ್ ವೃತ್ತದಿಂದ ನೂತನ ವಿದ್ಯಾಲಯ ಮೈದಾನದವರೆಗೆ ಭವ್ಯ ಕುಂಭ-ಕಳಸ ಮೆರವಣಿಗೆ ನಡೆಯಲಿದೆ. ಸುಮಾರು 2 ಸಾವಿರ ಮಹಿಳೆಯರು ಕುಂಭ-ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, 80ಕ್ಕೂ ಹೆಚ್ಚು ಶಿವಶರಣರ ಭಾವಚಿತ್ರಗಳು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಲಿವೆ. ಬಸವಾದಿ ಶಿವಶರಣರ ಆಚಾರ-ವಿಚಾರ, ಕಾಯಕ, ದಾಸೋಹ, ಶಿಕ್ಷಣ, ಆರೋಗ್ಯ ಹಾಗೂ ಸಾವಯವ ಕೃಷಿಯ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಸಮಾವೇಶದ ಅಧ್ಯಕ್ಷತೆ ವಹಿಸಿರುವ ಚಂದು ಪಾಟೀಲ್ ತಿಳಿಸಿದ್ದಾರೆ.ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಧರ್ಮಣ್ಣಾ ಇಟಗಾ, ಪಾಲಿಕೆ ಸದಸ್ಯ ಸಚಿನ ಕಡಗಂಚಿ, ವಿಶಾಲ ದರ್ಗಿ, ಬಸವರಾಜ ಮುನ್ನೋಳ್ಳಿ,ರಾಣೋಜಿ ದೊಡ್ಡಮನಿ, ವರದಾಶಂಕರ ಶೆಟ್ಟಿ ಸೇರಿದಂತೆ ಇತರೆ ಸಮಿತಿಯ ಮುಖಂಡರು ಶನಿವಾರ ವೇದಿಕೆಯ ಅಂತಿಮ ಸಿದ್ಧತೆಗಳ ವೀಕ್ಷಿಸಿದರು.ಸಾವಿರಾರು ಜನರ ಸೇರುವಿಕೆ ನಿರೀಕ್ಷೆ: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು, ರೈತರು, ಮಹಿಳೆಯರು ಹಾಗೂ ಯುವಕರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ.ಕುಂಭ-ಕಳಸ ಮೆರವಣಿಗೆ: ಸಮಾವೇಶಕ್ಕೂ ಮುನ್ನ ಸಂಜೆ 4ಕ್ಕೆ ನಗರದ ಜಗತ್ ವೃತ್ತದಿಂದ ನೂತನ ವಿದ್ಯಾಲಯ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. 80ಕ್ಕೂ ಹೆಚ್ಚು ಶಿವಶರಣರ ಭಾವಚಿತ್ರಗಳೊಂದಿಗೆ ಸುಮಾರು 2 ಸಾವಿರ ಮಹಿಳೆಯರು ಕುಂಭ-ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಠಾಧೀಶರು, ರೈತರು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಸಾಥ್ ನೀಡಲಿದ್ದಾರೆ.
ಶಿವಶರಣರ ಬದುಕಿನ ಮೌಲ್ಯಗಳು ಇಂದಿನ ಪೀಳಿಗೆಗೂ ದಾರಿದೀಪವಾಗಬೇಕು. ಸಮಾಜದಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಮಹತ್ವದ ವೇದಿಕೆಯಾಗುತ್ತವೆ. ಯುವಜನತೆ ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶರಣರ ಚಿಂತನೆಗಳನ್ನು ಅರಿತುಕೊಳ್ಳಬೇಕು ಎಂದು ಸಮಾವೇಶದ ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಯಾವುದೇ ಭೇದಭಾವಕ್ಕೆ ಅವಕಾಶ ನೀಡದೆ ಸಮಾಜದ ಎಲ್ಲ ವರ್ಗದವರನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡಲಾಗಿದೆ. ಬಸವಾದಿ ಶಿವಶರಣರು ಸಾರಿದ ಮಾನವೀಯತೆ, ಕಾಯಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಆಶಯ ಎಂದು ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಹೇಳಿದರು.