ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 5 ಅಂಗನವಾಡಿ ಕೇಂದ್ರಗಳ ಮಕ್ಕಳು ಪ್ರತಿಭಾ ಕಲೋತ್ಸವದಲ್ಲಿ ಭಾಗವಹಿಸಿ ವಿವಿಧ ವೇಷಭೂಷಣ ಧರಿಸಿ ಖುಷಿಪಟ್ಟರು.
ಕಿಕ್ಕೇರಿ: ಹೋಬಳಿಯ ಗಡಿಯಂಚಿನಲ್ಲಿನ ಮಕ್ಕಳು ವಿವಿಧ ವೇಷಭೂಷಣ ಧರಿಸಿ ತಮ್ಮ ಕಲಾಪ್ರತಿಭೆ ಅನಾವರಣಗೊಳಿಸಿದರು.
ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳು ಒಂದೆಡೆ ಸೇರಿ ಹಮ್ಮಿಕೊಂಡಿದ್ದ ಮಕ್ಕಳ ಪ್ರತಿಭೋತ್ಸವ ನೋಡುಗರಿಗೆ, ಪಾಲಕರಲ್ಲಿ ಸಂತಸ ಮೂಡಿಸಿತು.ಮಕ್ಕಳ ಪ್ರತಿಭೆ ಕಂಡು ಶಿಶು ಅಭಿವೃದ್ಧಿ ಇಲಾಖೆ ತಾಲೂಕು ಯೋಜನಾಧಿಕಾರಿ ವಿದ್ಯಾವತಿ ಓಂಕಾರ್‌ಗೌಡ ಮಾತನಾಡಿ, ಹಳ್ಳಿಯ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಸರ್ಕಾರ ಮಕ್ಕಳಿಗೆ ವಿವಿಧ ಯೋಜನೆ, ಪೌಷ್ಠಿಕ ಆಹಾರ, ಆರೋಗ್ಯ ಸೇವೆ, ಚುಚ್ಚುಮದ್ದು ನಂತಹ ಸೇವೆ ನೀಡುತ್ತಿದೆ .ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸಲು ಮನವೊಲಿಸಿ ಎಂದರು.
ಮಕ್ಕಳು ಬಾಲ್ಯಾವಸ್ಥೆಯಲ್ಲಿ ಸ್ವಚ್ಛಂದವಾಗಿ ಆಡಬೇಕು. ಕುಣಿದು ಕುಪ್ಪಳಿಸಬೇಕು. ಇಂತಹ ವಾತಾವರಣ ಸೃಷ್ಟಿಸುವುದು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿಯಾಗಿದ್ದು, ಮಕ್ಕಳ ಆರೋಗ್ಯದ ಜೊತೆಗೆ ಸಮಾಜಮುಖಿ ಕೆಲಸಕ್ಕೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಮೇಲ್ವಿಚಾರಕಿ ಎಸ್.ಆರ್.ಪಾರ್ವತಮ್ಮ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಆಹಾರ ಪೌಷ್ಠಿಕಾಂಶಭರಿತವಾಗಿದೆ. ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣ, ಆರೋಗ್ಯಸೇವೆ, ಸಕಾಲಕ್ಕೆ ಚುಚ್ಚುಮದ್ದು, ಗರ್ಭಿಣಿ, ಬಾಣಂತಿಯರಿಗೆ ಮಾಹಿತಿ ಸೇವೆ ಮಾಡುವುದರಲ್ಲಿ ಎಚ್ಚರಿಕೆ ಇರಲಿ ಎಂದರು.
ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 5 ಅಂಗನವಾಡಿ ಕೇಂದ್ರಗಳ ಮಕ್ಕಳು ಪ್ರತಿಭಾ ಕಲೋತ್ಸವದಲ್ಲಿ ಭಾಗವಹಿಸಿ ವಿವಿಧ ವೇಷಭೂಷಣ ಧರಿಸಿ ಖುಷಿಪಟ್ಟರು.ಈ ವೇಳೆ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಧಾಮಣಿ, ಅಶ್ವಿನಿ, ಗ್ರಾಮ ಮುಖಂಡರಾದ ಮಂಜುನಾಥ್, ಗಂಗಾಧರ, ಪುಟ್ಟಮ್ಮ, ಹುಚ್ಚಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಎಸ್. ಕಲಾವತಿ, ಭವಾನಿ, ಇಂದ್ರಾಣಿ, ಶಾಂತಮ್ಮ, ಮಂಜುಳಾ ಮತ್ತಿತರರು ಇದ್ದರು.