ಮನೆಯಲ್ಲಿದ್ದ ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿ ಸ್ಫೋಟಗೊಂಡ ಪರಿಣಾಮ ರಾಯಚೂರು ಮೂಲದ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿರುವ ಘಟನೆ ಚಂದ್ರಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿದ್ದ ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿ ಸ್ಫೋಟಗೊಂಡ ಪರಿಣಾಮ ರಾಯಚೂರು ಮೂಲದ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿರುವ ಘಟನೆ ಚಂದ್ರಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರಿಲಿಂಗಪ್ಪ (40), ಪತ್ನಿ ಲಕ್ಷ್ಮಮ್ಮ (43), ಮಗಳು ಚೈತ್ರಾ (11) ಬಸಮ್ಮ (9) ಮತ್ತು ಅವಳಿ ಮಕ್ಕಳಾದ ಗೀತಾ (3), ಗಿರಿಜಾ (3) ಗಾಯಗೊಂಡಿದ್ದಾರೆ. ಈ ಪೈಕಿ ಲಕ್ಷ್ಮಮ್ಮ ಹಾಗೂ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ರಾಯಚೂರು ಮೂಲದ ಕೂಲಿ ಕಾರ್ಮಿಕ ಕರಿಲಿಂಗಪ್ಪ ಅವರ ಕುಟುಂಬ ಕಳೆದ ಮೂರು ವರ್ಷದ ಹಿಂದೆ ನಗರಕ್ಕೆ ಕೆಲಸ ಅರಸಿಕೊಂಡು ಬಂದು ನಾಲ್ವರು ಮಕ್ಕಳೊಂದಿಗೆ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದಾರೆ. ಬೆಳಗ್ಗೆ 6.30 ಗಂಟೆ ಸುಮಾರಿಗೆ ಅಡಿಗೆ ಮಾಡಲು ಸ್ವೌವ್ ಹಚ್ಚುತ್ತಿದ್ದಂತೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಬೆಂಕಿ ಹೊತ್ತಿದ ನಂತರ ಸ್ಫೋಟದಿಂದಾಗಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ಸದ್ದು ಕೇಳಿ ನೆರೆಹೊರೆಯವರು ಹೊರಗೆ ಬಂದಾಗ ಕರಿಲಿಂಗಪ್ಪ ಅವರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ತಕ್ಷಣ ನೆರೆಯ ಜನರು ಮನೆಗೆ ಹೋಗಿ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ ಹೊರಗೆ ಕರೆತಂದು ಆರು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿದ್ದಾರೆ.

ಸುದ್ದಿ ತಿಳಿದು ಚಂದ್ರಾಲೇಔಟ್ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಬೆಂಕಿಯನ್ನು ನಂದಿಸಿದ್ದಾರೆ. ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.