ಹೂವಿನಹಡಗಲಿ: ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊಲೀಸರ ಜತೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ಕರೆ ನೀಡಿದರು.

ಇಲ್ಲಿನ ಜಿಬಿಆರ್‌ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆಯು ಮಾದಕ ವಸ್ತುಗಳ ದಾಸರಾಗಿ, ತಮ್ಮ ಅಮೂಲ್ಯವಾದ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದೆ. ಡ್ರಗ್ಸ್‌ ಸೇವನೆಗೆ ಪ್ರಚೋದನೆ ಮತ್ತು ಅದಕ್ಕೆ ಸಹಕರಿಸುವ ಜನ ನಿಮ್ಮ ಸ್ನೇಹಿತರಲ್ಲ, ಅವರು ನಿಮ್ಮ ವೈರಿಗಳಾಗಿದ್ದಾರೆ. ಆದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಜನರಲ್ಲಿ ಈ ಕುರಿತು ಮಾಹಿತಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಂಡ ಬಂದರೆ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಡ್ರಗ್ಸ್‌ ಎಂಬ ಮಾಯಾಜಾಲದ ಬಿಲದಲ್ಲಿ ಬೀಳದೇ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದು ಹೇಳಿದರು.

ಡಿವೈಎಸ್ಪಿ ಡಾ. ಸಂತೋಷ ಚಹ್ವಾಣ್‌ ಮಾತನಾಡಿ, ಡ್ರಗ್ಸ್‌ನ್ನು ಬೇರು ಸಮೇತ ಕಿತ್ತು ಹಾಕಲು ಕರ್ನಾಟಕ ಸರ್ಕಾರ ಅಪರೇಷನ್‌ ರೈಸ್‌ ಹಾಗೂ ಬೇಡ ಬ್ರೋ ಎಂಬ ವಿನೂತನ ಕಾರ್ಯಕ್ರಮದ ಮೂಲಕ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಯುವಕರ ಮೇಲೆ ಡ್ರಗ್ಸ್‌ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.


ಇದೇ ವೇಳೆ ನೆರೆದಿದ್ದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರುದ್ಧ ಜಾಗೃತಿ, ಅಭಿಯಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜತೆಗೆ ಈ ಕುರಿತು ಕರಪತ್ರಗಳ ಪ್ರದರ್ಶನ ಮಾಡಲಾಯಿತು.

ಈ ವೇಳೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ ರಡ್ಡಿ, ಸಿಪಿಐ ಮಲ್ಲಪ್ಪ ಹೂಗಾರ, ಪಿಎಸ್‌ಐಗಳಾದ ಮಣಿಕಂಠ, ಜೆ.ಕೆ. ಅಬ್ಬಾಸ್‌, ಅಶೋಕ ಬೇವೂರು, ಚಿತ್ರಕಲಾ ಶಿಕ್ಷಕ ಎಸ್‌. ದ್ವಾರಕೀಶ ರಡ್ಡಿ ಇತರರಿದ್ದರು.