ಸಾರಾಂಶ
ಶಿರಹಟ್ಟಿ: ಸಂವಿಧಾನ ದಿನವನ್ನು ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನ. ೨೬ರಂದು ಅರ್ಥಪೂರ್ಣವಾಗಿ ಮತ್ತು ಹಬ್ಬದಂತೆ ಅಚರಿಸಲು ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವು ತಿಳಿಸಿದರು.
ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಸೋಮವಾರ ಜರುಗಿದ ಸಂವಿಧಾನ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂವಿಧಾನ ದಿನಾಚರಣೆ ನಿಮಿತ್ತ ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ಬೆಳಗ್ಗೆ ೯ ಗಂಟೆಗೆ ಆರಂಭವಾಗುವ ಜಾಥಾದಲ್ಲಿ ರಾಷ್ಟ್ರಧ್ವಜದೊಂದಿಗೆ ಸಂವಿಧಾನದ ಪುಸ್ತಕ ಪ್ರದರ್ಶಿಸುವುದು, ವಿವಿಧ ಸಂಘಟನೆಯವರ ಸಹಯೋಗದೊಂದಿಗೆ ಹೆಚ್ಚು ಜನರನ್ನು ಸೇರಿಸುವ ಮೂಲಕ ಅಚ್ಚುಕಟ್ಟಾಗಿ ತಾಲೂಕು ಮಟ್ಟದಲ್ಲಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾಥಾದಲ್ಲಿ ಸಂವಿಧಾನ ಪೂರಕವಾದ ಮಾಹಿತಿ ಚಿತ್ರಗಳು ಪ್ರದರ್ಶನವಾಗಬೇಕು. ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಜಾಥಾದಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ, ಸಂವಿಧಾನದ ಹಕ್ಕುಗಳ ಬಗ್ಗೆಯೇ ಹೆಚ್ಚು ಪ್ರದರ್ಶನವಾಗಬೆಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.ಅಧಿಕಾರಿಗಳ ಬೇಜವಾಬ್ದಾರಿ
ಸಂವಿಧಾನ ದಿನ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ೨೮ ಇಲಾಖೆಗಳ ಪೈಕಿ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಿದ್ದರು. ಮೊದಲೇ ನೋಟೀಸ್ ನೀಡಿ ಸಭೆಗೆ ಹಾಜರಾಗುವಂತೆ ಕೋರಿದರೂ ಗೈರಾಗಿದ್ದಕ್ಕೆ ಮುಖಂಡ ಜಾನು ಲಮಾಣಿ ಆಕ್ಷೇಪಿಸಿದರು. ಅಧಿಕಾರಿಗಳ ನಡೆ ಬಗ್ಗೆ ನೋಟೀಸ್ ನೀಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಮಾತನಾಡಿ, ನಾವು ಈ ಪ್ರಮುಖ ಸರ್ಕಾರಿ ಹುದ್ದೆಯಲ್ಲಿದ್ದೇವೆ ಎಂದರೆ ಅದು ಬಾಬಾ ಸಾಹೇಬ ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ. ಇಂಥ ದಿನವನ್ನು ನಾವು ಅರ್ಥಪೂರ್ಣವಾಗಿ ಆಚರಿಸಲು ಕರೆದ ಸಭೆಗೂ ಅಧಿಕಾರಿಗಳು ಗೈರ ಉಳಿದಿರುವುದು ಬೇಸರದ ಸಂಗತಿ. ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳಿಗೆ ಸಂವಿಧಾನದಲ್ಲಿ ಅವಕಾಶಗಳನ್ನು ನೀಡಿದ್ದಾರೆ. ಆದ್ದರಿಂದ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಸರ್ವರಿಗೂ ಅನ್ವಯವಾಗುವ ಭಾರತ ಸಂವಿಧಾನ ಪೀಠಿಕೆ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ರೀತಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರು ಕ್ರಮ ವಹಿಸಬೇಕು. ತಪ್ಪದೇ ನ. ೨೬ರಂದು ಎಲ್ಲರೂ ಹಾಜರಿದ್ದು, ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಉಪನ್ಯಾಸ ನೀಡಲಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಸಿಪಿಐ ಬಿ.ವ್ಹಿ. ನ್ಯಾಮಗೌಡ, ಬಿಇಒ ಎಚ್.ಎನ್. ನಾಯಕ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಎಂ.ಎಸ್. ಸಂಕನೂರ, ಮರಿಗೌಡ ಸುರಕೋಡ, ಜಾನು ಲಮಾಣಿ, ಮುತ್ತು ಭಾವಿಮನಿ, ಬಿ.ಜಿ. ಗಿರಿತಮ್ಮಣ್ಣವರ, ಯಲ್ಲಪ್ಪ ಬಂಗಾರಿ, ಹೇಮಂತ ಕೆಂಗೊಂಡ, ದೇವಪ್ಪ ಲಮಾಣಿ, ಈರಣ್ಣ ಚವ್ಹಾಣ, ರಾಜು ಶಿರಹಟ್ಟಿ, ತಿಪ್ಪಣ್ಣ ಲಮಾಣಿ ಇತರರು ಇದ್ದರು.
;Resize=(128,128))