ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಮುಂದಿನ ಪ್ರಕ್ರಿಯೆಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಿ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ವಿಶ್ವನಾಥ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಮುಂದಿನ ಪ್ರಕ್ರಿಯೆಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಿ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ವಿಶ್ವನಾಥ್‌ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ತಮ್ಮ ಹೆಸರಿರುವ ಬಗ್ಗೆ ಮತದಾರರರು ಖಚಿತಪಡಿಸಿಕೊಳ್ಳಬೇಕು. ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಸೆ.23ರೊಳಗೆ ಅರ್ಜಿ ಸಲ್ಲಿಸಬೇಕು. ಮತದಾರರ ಪರಿಷ್ಕರಣೆ ಪೂರ್ವದಲ್ಲಿ ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ ಒಟ್ಟು 2,16,605 ಮತಗಳಿತ್ತು. ಪರಿಷ್ಕರಣೆಯಲ್ಲಿ 2,16,605ಕ್ಕೂ ಗಣತಿ ನಮೂನೆ ವಿತರಿಸಿದ್ದು, 1,98,462 ನಮೂನೆ ಡಿಜಿಟಲೀಕರಣವಾಗಿದೆ. 2,16,605 ಮತದಾರರಲ್ಲಿ 18,143 ಮತಗಳು ಡಿಲೀಟ್‌ ಆಗಿವೆ ಎಂದು ಮಾಹಿತಿ ನೀಡಿದರು.

ಪರಿಷ್ಕರಣೆಗೂ ಮೊದಲು ಕ್ಷೇತ್ರದಲ್ಲಿ 249 ಮತಗಟ್ಟೆಗಳಿತ್ತು. ಇದೀಗ 257 (8 ಹೆಚ್ಚಳ) ಮತಗಟ್ಟೆಗಳಾಗಿವೆ. ಪ್ರಕಟಿತ ಕರಡು ಮತದಾರರ ಪಟ್ಟಿಯ ಒಂದು ಪ್ರತಿ ನೋಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಹೆಸರು ಖಚಿತಪಡಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಿಎಲ್‌ಎ-2 ರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕರಡು ಮತದಾರರ ಪಟ್ಟಿಯ ಪ್ರಕಟಣೆ ನಂತರ ಕಳೆದ ಆ.24ರಿಂದ ಸೆ.23 ರೊಳಗೆ ಸಾರ್ವಜನಿಕರು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆ ಆ.24ರಿಂದ ಅ.22ರವರೆಗೆ ಮತದಾರರ ನೋಂದಣಾಧಿಕಾರಿಗಳು ಇತ್ಯರ್ಥ ಪಡಿಸಲಿದ್ದಾರೆ ಎಂದು ತಿಳಿಸಿದರು.

ಅರ್ಹ ಮತದಾರರ ಹೆಸರು ಕೈ ಬಿಟ್ಟು ಹೋಗಿದ್ದಲ್ಲಿ ನಮೂನೆ-೬ ಅರ್ಜಿಯ ಜೊತೆ ಘೋಷಣಾ ಪತ್ರ ಹಾಗೂ ಅಗತ್ಯ ದಾಖಲಾತಿ ನೀಡಿ ಹೆಸರು ಸೇರ್ಪಡೆ ಗೊಳಬಹುದಾಗಿದೆ ಎಂದು ಹೇಳಿದರು.

ವಿಚಾರಣೆಗೆ 12ರಲ್ಲಿ 1 ದಾಖಲೆ ಸಾಕು!

2002ರ ಮತದಾರರ ಪಟ್ಟಿಯ ಮ್ಯಾಪಿಂಗ್‌ ಆಗದಿರುವ ಹಾಗೂ ವ್ಯತ್ಯಾಸ ಕಂಡು ಬಂದಿರುವ ಮತದಾರರಿಗೆ ನೋಟಿಸ್‌ ಕಳುಹಿಸಲಾಗುವುದು. ಬಿಎಲ್‌ಒ ಮುಖಾಂತರ ೧೨ ದಾಖಲೆಗಳಲ್ಲಿ ಒಂದನ್ನು ತಲುಪಿಸಿ ಸ್ವೀಕೃತಿ ಪಡೆಯಬೇಕು ಎಂದು ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ತಿಳಿಸಿದರು.

1.ಯಾವುದೇ ಕೇಂದ್ರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಉದ್ಯಮದ ಕಾಯಂ ನೌಕರ ಅಥವಾ ಪಿಂಚಣಿದಾರರಿಗೆ ನೀಡಲಾದ ಗುರುತಿನ ಚೀಟಿ ಅಥವಾ ಪಿಂಚಿಣಿ ಪಾವತಿ ರಸೀದಿ(ಪಿಪಿಒ).

2.ಭಾರತದಲ್ಲಿ 1987 ಜು.1 ಕ್ಕಿಂತ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಬ್ಯಾಂಕ್‌, ಅಂಚೆ ಇಲಾಖೆ, ಎಲ್‌ಐಸಿ ಅಥವಾ ಸಾರ್ವಜನಿಕ ವಲಯದ ಉದ್ಯಮದಿಂದ ನೀಡಲಾದ ಗುರುತಿನ ಚೀಟಿ/ಪ್ರಮಾಣ ಪತ್ರ/ದಾಖಲೆ.

3.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ.

4.ಪಾಸ್‌ ಪೋರ್ಟ್‌

5.ಮಾನ್ಯತೆ ಪಡೆದ ಮಂಡಳಿ/ವಿವಿ ನೀಡಲಾದ ಮೆಟ್ರಿಕ್ಯುಲೇಷನ್‌ ಅಥವಾ ಶೈಕ್ಷಣಿಕ ಪ್ರಮಾಣ ಪತ್ರ.

6.ರಾಜ್ಯ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಕಾಯಂ ನಿವಾಸ ಪ್ರಮಾಣ ಪತ್ರ.

7.ಅರಣ್ಯ ಹಕ್ಕು ಪ್ರಮಾಣ ಪತ್ರ.

8.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ/ಎಸ್‌ಸಿ/ಎಸ್ಟಿ ಅಥವಾ ಇತರೆ ಜಾತಿ ಪ್ರಮಾಣ ಪತ್ರ.

9.ರಾಷ್ಟ್ರೀಯ ನಾಗರೀಕರ ನೋಂದಣಿ.

10.ಯಾವುದೇ ಕಾನೂನು ಬದ್ದ ಅಥವಾ ಆಡಳಿತಾತ್ಮಕ ನಿಯಮಗಳಡಿಯಲ್ಲಿ ಸರ್ಕಾರಿ ಅಧಿಕಾರಿಗಳು ನಿರ್ವಹಿಸುವ ಕುಟುಂಬ ನೋಂದಣಿ.

11.ಸರ್ಕಾರದಿಂದ ನೀಡಲಾದ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣ ಪತ್ರ.

12.ಆಧಾರ್‌ ಕಾರ್ಡ್‌ ನ್ನು ಗುರುತಿನ ಚೀಟಿಯ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ. ಆಧಾರ್‌ ರನ್ನು ಜನ್ಮ ದಿನಾಂಕ ಮತ್ತು ಪೌರತ್ವ ದೃಡೀಕರಣಕ್ಕಾಗಿ ಪರಿಗಣಿಸುವುದಿಲ್ಲ ಎಂದರು.

ಅಂತಿಮ ಮತದಾರರ ಪಟ್ಟಿ ಬರುವ ಅ.27 ರಂದು ಪ್ರಕಟಣೆಯಾಗಲಿದ್ದು, ನಿಖರ ಹಾಗೂ ದೋಷರಹಿತ ಮತದಾರರ ಪಟ್ಟಿಸಿದ್ದ ಪಡಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗದ ಎಲ್ಲಾ ನಿರ್ದೇಶನಗಳನ್ನು ಪಾಲಿಸಿ, ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.