ಹರಪನಹಳ್ಳಿ: ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರೊಂದಿಗೆ ಸಹಕರಿಸಿ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಯುವಜನತೆಗೆ ಕರೆ ನೀಡಿದರು.
ಅವರು ನಗರದ ಬಾಬುಜಗಜೀವನ ರಾಂ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾದಕ ವಸ್ತುಗಳನ್ನು ಹಿಮ್ಮೆಟ್ಟಿಸಿ ಸಮಾಜದಲ್ಲಿ ಮುಂದೆ ಬರಬೇಕು. ಡ್ರಗ್ಸ್ ಸೇವಿಸಿ ಎಂದು ಹೇಳುವವರು ನಿಮ್ಮ ಸ್ನೇಹಿತರಲ್ಲ, ಬದಲಾಗಿ ವೈರಿಗಳು. ದುಶ್ಟಗಳಿಗೆ ಒಳಗಾದವರಾಗಲಿ ಅಥವಾ ಅಂತಹ ವಸ್ತುಗಳನ್ನು ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಿ ಎಂದು ಅವರು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಎಂ.ಪಿ. ಲತಾ ಮಾತನಾಡಿ, ಶ್ರೀಮಂತ, ಬಡವ, ಹೆಣ್ಣು, ಗಂಡು ಎನ್ನದೆ ಈಚೆಗೆ ಮಾದಕ ದ್ರವ್ಯಗಳಿಗೆ ಯುವ ಜನತೆ ದಾಸರಾಗುತ್ತಿದ್ದಾರೆ. ನಿಮಗೆ ತಂದೆ-ತಾಯಿಯ ಪ್ರೀತಿ ಸಿಕ್ಕಿದೆ. ಆ ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳದೆ ಚೆನ್ನಾಗಿ ಅಭ್ಯಾಸ ಮಾಡಿ ಒಳ್ಳಯ ವ್ಯಕ್ತಿಯಾಗಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಡಿವೈಎಸ್ಪಿ ಸಂತೋಷ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಡ್ರಗ್ಸ್ ಅನ್ನು ಬೇರು ಸಮೇತ ಕಿತ್ತು ಹಾಕಲು ಕರ್ನಾಟಕ ಸರ್ಕಾರ ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಎಂಬ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಡ್ರಗ್ಸ್ ಯುವ ಜನತೆಯ ಮೇಲೆ ಕೆಟ್ಟ ಪರಿಮಾಣ ಬೀರುತ್ತದೆ ಎಂದು ತಿಳಿಸಿದರು.
ಸಂಪ್ರದಾಯ ಟ್ರಸ್ಟ್‌ನ ಸಂಪನ್ಮೂಲ ವ್ಯಕ್ತಿ ಚೇತನ ಮಾದಕ ದ್ರವ್ಯ ಕುರಿತು ಜಾಗೃತಿ ಉಪನ್ಯಾಸ ನೀಡಿದರು.ಮೆಚ್ಚುಗೆ ಪಡೆದ ಕಿರು ನಾಟಕ ಮಾದಕ ದ್ರವ್ಯ ಮುಕ್ತ ಜಾಗೃತಿಗಾಗಿ ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ತಂಡದವರಾದ ಸಿಪಿಐ ಮಹಾಂತೇಶ ಸಜ್ಜನ್, ಮಂಜುಳಾ, ಬಸವರಾಜ, ನೇತ್ರಾವತಿ, ವಿದ್ಯಾಶ್ರೀ, ಕಾವೇರಿ, ಸುಚಿತ್ರ, ಚಂದ್ರಶೇಖರ, ದೇವಣ್ಣ ಆಚಾರ, ಮಂಜುನಾಥ ಅವರು ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ನಡೆಯುವ ಮಾದಕ ದ್ರವ್ಯ ಸೇವನೆ ಉತ್ತೇಜಿಸುವ ಹಾಗೂ ಅದರಿಂದ ಆಗುವ ತೊಂದರೆಗಳ ಕುರಿತು ಅಭಿನಯಿಸಿದ ಕಿರು ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು.
ಡಿವೈಎಸ್ಪಿ ಸಂತೋಷ್ ಚವ್ಹಾಣ, ಸಿಪಿಐ ಮಹಾಂತೇಶ ಸಜ್ಜನ, ಪಿಎಸ್ ಐಗಳಾದ ಶಂಭುಲಿಂಗ ಹಿರೇಮಠ, ನಾಗರತ್ನಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಲಾಟಿ ದಾದಾಪೀರ , ಬಿಎಡ್ ಕಾಲೇಜು ಡೀನ್ ಟಿ.ಎಂ. ರಾಜಶೇಖರ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.