ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಗರ ವಿಧಾನಸಭಾ ಕ್ಷೇತ್ರದ ಸಾಗರ ಮತ್ತು ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಶರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಕಡಿವಾಣ ಹಾಕಬೇಕಾದ ಪೊಲೀಸರು ಶಾಸಕರ ಬೆಂಬಲಿಗರ ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯ ಇದೆಯೇ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಪ್ರಶ್ನಿಸಿದರು.ಸಾಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಎಸ್ಪಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಗರ ತಾಲೂಕಿನಲ್ಲಿ ಮರುಳು ಮಾಫಿಯಾ ಮಿತಿ ಮೀರಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಶಾಸಕರ ಬೆಂಬಲಿಗರಿಗೆ ಏನಾದರೂ ವಿನಾಯಿತಿ ಇದೆಯಾ? ಪೊಲೀಸರು ಶಾಸಕರ ಅಣತಿಯಂತೆ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿ ತಿಂಗಳು ಲಕ್ಷಾಂತರ ಮಾಮೂಲಿಯನ್ನು ಪೊಲೀಸರು ಗಣಿ ಮತ್ತು ಭೂವಿಜ್ಞಾನಿ ಇಲಾಖೆ ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪಡೆಯುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ. ಈ ಸರ್ಕಾರದಲ್ಲಿ ಲಂಚ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದಾಗಿ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆಂದು ಆರೋಪಿಸಿದರು.ಪೊಲೀಸ್ ಇಲಾಖೆಯಲ್ಲಿ ತಿಂಗಳ ಮಾಮೂಲಿ ನೀಡಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿ ₹14 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ದುಡಿಯಲು ಈ ದಂಧೆ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಅವರು ಕ್ರಮ ಕೈಗೊಳ್ಳದಿದ್ದರೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷ ನಾಯಕರಿಗೆ ತಿಳಿಸುತ್ತೇವೆ ಎಂದು ಎಚ್ಚರಿಸಿದರು. ಮೀಟರ್ ಬಡ್ಡಿ ಮಾಫಿಯಾಗೆ ಒಬ್ಬ ಬಲಿಯಾಗಿದ್ದಾನೆ. ಬಡ್ಡಿ ಮಾಫಿಯಾದ ಬಗ್ಗೆ ಸಂತ್ರಸ್ತ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಿಕೊಂಡಿಲ್ಲ. ಕೊನೆಗೆ ಸಂತ್ರಸ್ತ ಬಡ್ಡಿ ಮಾಫಿಯಾದವರ ದೌರ್ಜನ್ಯಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಪೊಲೀಸರು ಹೋಗಿಲ್ಲ. ಆತ ಬುಧವಾರ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಇನ್ನಾದರೂ ಜಿಲ್ಲೆಯಲ್ಲಿ ಬಡ್ಡಿ ಮಾಫಿಯವನ್ನು ಪೊಲೀಸ್ ಇಲಾಖೆ ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಹೊಸನಗರ ಹಾಗೂ ಸಾಗರ ಭಾಗದ ಪ್ರಮುಖರು ಉಪಸ್ಥಿತರಿದ್ದರು.ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಎಸ್‌ಪಿಗೆ ದೂರು
ಸಾಗರ ವಿಧಾನಸಭಾ ಕ್ಷೇತ್ರದ ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಜೊತೆಗೆ ಅಕ್ರಮವಾಗಿ ಜಂಬು ಇಟ್ಟಿಗೆ ಗಣಿಗಾರಿಕೆ ಕೂಡ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ. ಮೇಘರಾಜ್ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ನೀಡಿ ದೂರು ನೀಡಿದರು. ಶರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಾಗರ ತಾಲೂಕಿನ ಆನಂದಪುರ ಸುತ್ತಮುತ್ತ ಜಂಬಿಟ್ಟಿಗೆ ಗಣಿಗಾರಿಕೆ ನಡೆಯುತ್ತಿದೆ. ಶಾಸಕರ ಬೆಂಬಲಿಗರು ಈ ಅಕ್ರಮದಲ್ಲಿ ತೊಡಗಿದ್ದು ಅವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಪರವಾನಗಿ ಹೊಂದಿರುವವರಿಗೆ ಮಾತ್ರ ಮರಳು ಎತ್ತುವಳಿಗೆ ಹಾಗೂ ಜಂಬಿಟ್ಟಿಗೆ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ನಿಯೋಗ ಆಗ್ರಹಿಸಿದೆ.