ಸಾರಾಂಶ
ಕ್ರೀಡಾ ಸಾಂಸ್ಕೃತಿಕ, ರೋವರ್ಸ್, ರೇಂಜರ್ ಘಟಕಗಳ ಸಮಾರೋಪ
ಕನ್ನಡಪ್ರಭ ವಾರ್ತೆ ಹಿರಿಯೂರುಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಅಭಿವೃದ್ಧಿ ಸಮಿತಿ, ಕ್ರೀಡಾ ಸಾಂಸ್ಕೃತಿಕ ಹಾಗೂ ರೋವರ್ಸ್ ಮತ್ತು ರೇಂಜರ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಪೋಷಕರ ಮತ್ತು ಶಿಕ್ಷಕರ ಶ್ರಮ ಮತ್ತು ಕಾಳಜಿಯನ್ನು ಅರಿತು ವಿದ್ಯಾಬ್ಯಾಸದತ್ತ ಗಮನ ಹರಿಸಿ. ವಿದ್ಯಾರ್ಥಿ ಜೀವನದಲ್ಲಿ ಸಮಯ ಅಮೂಲ್ಯವಾಗಿದ್ದು ಎಲ್ಲರೂ ಸಮಯ ವ್ಯರ್ಥ ಮಾಡದೇ ಓದಿನತ್ತ ಆಸಕ್ತಿ ವಹಿಸಿ. ಶ್ರದ್ದೆ ಮತ್ತು ಏಕಾಗ್ರತೆಯ ವಿದ್ಯೆ ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ.ಕಾಲೇಜಿನ ವಿಜ್ಞಾನ ವಿಭಾಗದ ಸ್ಮಾರ್ಟ್ ಕ್ಲಾಸ್‌ಗೆ ಕಂಪ್ಯೂಟರ್, ಪ್ರೊಜೆಕ್ಟರ್ ಹಾಗೂ ಅಗತ್ಯ ಸಲಕರಣೆ ಒದಗಿಸಲಾಗುವುದು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ನೂರಾರು ಕೋಟಿ ರುಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದೆ. ಹಾಗಾಗಿ ಎಲ್ಲಾ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾಬ್ಯಾಸ ಮಾಡಿ ಸದೃಢ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜಿ ಧನಂಜಯ ಕುಮಾರ್, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಪ್ರಾಚಾರ್ಯ ಕೆ.ಇ.ನಾಗರಾಜ್, ಉಪನ್ಯಾಸಕರಾದ ಜಿಡಿ ಚಿತ್ತಣ್ಣ, ಕಾಂತರಾಜ್, ಹಳೆಯ ವಿದ್ಯಾರ್ಥಿಗಳಾದ ಕೆ.ಟಿ.ಪ್ರಕಾಶ್, ಕೆ.ವಿ.ಅಮರೇಶ್, ಡಾ.ಮೋಹನ್ ಕುಮಾರ್, ವಿ.ತಿಪ್ಪೇಸ್ವಾಮಿ, ಅಶ್ವಕ್ ಅಹಮದ್,ಆರ್ ರಂಗಸ್ವಾಮಿ, ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.