ಸಾರಾಂಶ
ಹಾಲವರ್ತಿಮಠ ತುಂಬ ಇತಿಹಾಸ ಇರುವ ಜಾಗ, ಲಿಂಗನಾಯಕನಹಳ್ಳಿ ಸ್ವಾಮೀಜಿ ಇಲ್ಲಿಗೆ ಬಂದು ಅಭಿವೃದ್ಧಿಗೆ ಮುಂದಾಗಿದ್ದಾರೆ.
ಹರಪನಹಳ್ಳಿ: ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಚೆನ್ನವೀರ ಶಿವಯೋಗಿಗಳ ಹಾಲವರ್ತಿಮಠದ ಅಭಿವೃದ್ಧಿಗೆ ಕೈಲಾದ ಮಟ್ಟಿಗೆ ಸಹಕಾರ ನೀಡುವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದ ಹಾಲವರ್ತಿಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಸಂಪದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.ಹಾಲವರ್ತಿಮಠದ ಜಾಗವನ್ನು ಮಾಲಿಕರಾದ ಬೆಟ್ಟನಗೌಡ್ರು ಸ್ವಾಮೀಜಿಗಳ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟ ನಂತರ ಸರ್ಕಾರದಿಂದ ಏನು ಸಾಧ್ಯವೋ ಅದನ್ನು ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಹಾಲವರ್ತಿಮಠ ತುಂಬ ಇತಿಹಾಸ ಇರುವ ಜಾಗ, ಲಿಂಗನಾಯಕನಹಳ್ಳಿ ಸ್ವಾಮೀಜಿ ಇಲ್ಲಿಗೆ ಬಂದು ಅಭಿವೃದ್ಧಿಗೆ ಮುಂದಾಗಿದ್ದಾರೆ. ನನ್ನ ಸಹಕಾರವೂ ಇದೆ ಎಂದು ಅವರು ಹೇಳಿದರು.ಹಾಲವರ್ತಿಮಠದ ಅಭಿವೃದ್ಧಿಗೆ ಭಕ್ತರು ತನು, ಮನ, ಧನದಿಂದ ಸಹಕರಿಸಬೇಕು ಎಂದು ಅವರು ಕೋರಿದರು.
ಇಲ್ಲಿಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಮಾತ್ರ ಮನುಷ್ಯನಿಗೆ ಶಾಶ್ವತ ಸುಖ ನೀಡಲು ಸಾಧ್ಯ ಎಂದು ನಾಡಿನ ಸಾಧು ಸಂತರು ತೋರಿಸಿಕೊಟ್ಟಿದ್ದಾರೆ. ಸಂಸ್ಕಾರ ನೀಡುವ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಾ ಬಂದಿವೆ ಎಂದರು.ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ ಎಂಬ ಸತ್ಯವನ್ನು ಅರಿತರೆ ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ವೀರಶೈವ ಮಠ ಮಾನ್ಯಗಳು ಅಕ್ಷರ, ಅನ್ನ ದಾಸೋಹ ನಿರಂತರ ಮಾಡಿಕೊಂಡು ಬಂದಿವೆ ಎಂದು ನುಡಿದರು.
ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ನಿರಂಜನ ದೇವರು ಮಾತನಾಡಿ, ಇಂತಹ ಕಾರ್ಯಕ್ರಮಕ್ಕೆ ಕೇವಲ ಸ್ವಾಮಿಗಳಲ್ಲ ಜೊತೆಗೆ ಭಕ್ತರು ಬೇಕು. ಶಿವಾನುಭವ ಕೇಳಿ ಶಿವಾನುಭಾವಿಗಳಾಗಿ ಎಂದ ಹೇಳಿದರು.ಸುಖ ಬೇರೆ, ಆನಂದ ಬೇರೆ ಆತ್ಮ ಜಾಗೃತರಾದಗ ಮಾತ್ರ ಆನಂದ ಸಿಗುತ್ತದೆ ಎಂದು ನುಡಿದರು.
ಹಾಲವರ್ತಿ ಮಠದ ಚೆನ್ನವೀರ ಮಹಾಶಿವಯೋಗಿ, ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ, ಹಿರೇಸಿಂದಗಿ ಕಪ್ಪತಮಠದ ಚಿದಾನಂದ ಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ವಹಿಸಿದ್ದರು.ಸ್ಥಳೀಯ ದಾನ ಚಿಂತಾಮಣಿ ಎಚ್.ಎಂ. ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು. 15ನೇ ಶಿವಾನುಭವ ಸಂಪದವನ್ನು ಕಲ್ಲಹಳ್ಳಿಯ ಕೆ.ಎಂ.ಗುರುಸಿದ್ದಯ್ಯ ನಡೆಸಿಕೊಟ್ಟರು.
ಮುಖಂಡರಾದ ಆರುಂಡಿ ನಾಗರಾಜ, ಪಟೆಲ್ ಬೆಟ್ಟನಗೌಡ,, ತೆಗ್ಗಿಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಶಶಿಧರ ಪೂಜಾರ, ಅರಸೀಕೆರೆ ವೈ.ಡಿ. ಅಣ್ಣಪ್ಪ, ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ, ವಿದ್ಯುತ್ ಗುತ್ತಿಗೆದಾರ ಎ.ಕರಿಬಸವರಾಜ, ರಾಜಶೇಖರ ಬಣಕಾರ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಶ್ರೀ ಬಸವರಾಜ, ಎಂ.ಪಿ.ಎಂ. ಶಾಂತವೀರಯ್ಯ, ಕೆ.ಎಸ್. ವೀರಭದ್ರಪ್ಪ, ನಾಗರತ್ನಮ್ಮ ಸೋಗಿ, ಪುರಸಭಾ ನಾಮನಿರ್ದೆಶನ ಸದಸ್ಯ ಹೇಮಣ್ಣ ಮೋರಗೇರಿ, ಹೆಸ್ಕಾಂ ಎಇಇ ವಿರುಪಾಕ್ಷಪ್ಪ ಇದ್ದರು.