ಸಾರಾಂಶ
-ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್‌ಹುಕುಂ, ನಗರ ಆಶ್ರಯ, ಆರಾಧನಾ ಸಮಿತಿ ಸಭೆಯಲ್ಲಿ ಶಾಸಕ ರಘುಮೂರ್ತಿ
- - -ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರ ಪ್ರತಿಯೊಂದು ಯೋಜನೆ ಅನುಷ್ಠಾನಗೊಳಿಸಬೇಕಾದರೆ ಅದಕ್ಕೆ ಅಧಿಕಾರಿಗಳ ಸಹಕಾರ ಪ್ರಮುಖವಾದದ್ದು. ಅಧಿಕಾರಿಗಳು ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯವನ್ನು ನೇರವಾಗಿ ತಲುಪಿಸಿದಾಗ ಮಾತ್ರ ಸರ್ಕಾರದ ಯೋಜನೆಗೆ ನ್ಯಾಯ ದೊರೆಯುತ್ತದೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.ಅವರು, ಶನಿವಾರ ನಗರ ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್‌ಹುಕುಂ, ನಗರ ಆಶ್ರಯ ಮತ್ತು ಆರಾಧನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಲೇಬೇಕು ಎಂದು ಸಲಹೆ ನೀಡಿದರು.
ನಗರ ಆಶ್ರಯ ಸಮಿತಿ ಸಭೆಯಲ್ಲಿ ಕೈಗೊಳ್ಳುವ ಎಲ್ಲ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಪೌರಾಯುಕ್ತ ಜಗರೆಡ್ಡಿ ಅವರದಾಗಿದೆ. ಇದರಲ್ಲಿ ಲೋಪವಾದರೆ ಸಹಿಸುವುದಿಲ್ಲ ಎಂದರು. ಪೌರಾಯುಕ್ತ ಜಗರೆಡ್ಡಿ ಮಾಹಿತಿ ನೀಡಿ, ವಾಜಪೇಯಿ ವಸತಿ ಯೋಜನೆ ೭೧, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ೨೪ ಅರ್ಜಿಗಳು ಈಗಾಗಲೇ ಎಲ್ಲ ದಾಖಲಾತಿಗಳೊಂದಿಗೆ ತಯಾರಿವೆ ಎಂದರು.ಬಗರ್‌ಹುಕುಂ ಸಮಿತಿ ಉದ್ದೇಶಿಸಿ ಮಾತನಾಡಿದ ಶಾಸಕರು, ಈಗಾಗಲೇ ತುರುವನೂರು ಹೋಬಳಿ ಮಟ್ಟದಲ್ಲಿ ೧೬, ನಗರ ಕಸಬಾದಲ್ಲಿ ೧೫ ಫಲಾನುಭವಿಗಳು ಈಗಾಗಲೇ ಸಮಿತಿಯಿಂದ ಶಿಫಾರಸುಗೊಂಡಿದೆ. ಕೂಡಲೇ ಅವರಿಗೆ ಸಾಗುವಳಿ ಚೀಟಿ ನೀಡುವಂತೆ ಸೂಚಿಸಿದರು. ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿದ್ದರೂ ಕೆಲವೊಂದು ಸಣ್ಣಪುಟ್ಟ ಲೋಪಗಳಿದ್ದರೆ ತಿರಸ್ಕರಿಸುವುದು ಬೇಡ. ಮತ್ತೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ಫಲಾನುಭವಿ ಗುರುತಿಸಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಆರಾಧನಾ ಸಮಿತಿ ಸದಸ್ಯರೊಂದಿಗೆ ಮಾತನಾಡಿದ ಅವರು, ೨೦೨೩-೨೪ನೇ ಸಾಲಿನಲ್ಲಿ ಈಗಾಗಲೇ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮುಕ್ತಾಯಗೊಂಡಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದರು.ಸಭೆಯಲ್ಲಿ ತಹಸೀಲ್ದಾರ್ ರೇಹಾನ್ ಪಾಷ, ಚಿತ್ರದುರ್ಗ ತಹಸೀಲ್ದಾರ್ ನಾಗವೇಣಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸಮುದಾಯ ಅಧಿಕಾರಿ ಭೂತಣ್ಣ, ಲೋಕೋಪಯೋಗಿ ಎಂಜಿನಿಯರ್ ವಿಜಯಭಾಸ್ಕರ್, ಸಮಾಜ ಕಲ್ಯಾಣಾಧಿಕಾರಿ ದೇವ್ಲಾ ನಾಯ್ಕ, ಪರಿಶಿಷ್ಟ ಪಂಗಡಗಳ ಅಧಿಕಾರಿ ಶಿವರಾಜ್, ಸರ್ವೆ ಅಧಿಕಾರಿ ಬಾಬು ರೆಡ್ಡಿ, ಬಿಸಿಎಂ ಅಧಿಕಾರಿ ರಮೇಶ್, ಶಿರಸ್ತೇದಾರ್ ಸದಾಶಿವಪ್ಪ, ಆರ್.ತಿಪ್ಪೇಸ್ವಾಮಿ, ಡಿ.ಪ್ರಕಾಶ್, ಸುಮಲತಾ, ಸಮಿತಿ ಸದಸ್ಯರಾದ ರ‍್ರಬಾಲಪ್ಪ, ಲಕ್ಷ್ಮೀದೇವಿ, ರಾಜಶೇಖರ್, ಜಿ.ಮಾರಪ್ಪ ಉಪಸ್ಥಿತರಿದ್ದರು.
- - -ಫೋಟೊ: ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಟಿ.ರಘುಮೂರ್ತಿ ಬಗರ್‌ಹುಕುಂ ಸಮಿತಿ ಸಭೆ ನಡೆಸಿದರು.
-೭ಸಿಎಲ್‌ಕೆ೧.ಜೆಪಿಜಿ: