ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಸಹಕಾರಿ ಸಂಘಗಳು ಸ್ವಾವಲಂಬಿಗಳಾಗಿ ಕಾರ್ಯನಿರ್ವಹಿಸಲು ಸರ್ಕಾರಗಳು ಬಿಡಬೇಕು. ಅಧಿಕಾರಿಗಳು ಮತ್ತು ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಮನಮೋಹನ್ ಸಿಂಗ್ ಅವರು ಅರ್ಧನಾರೇಶ್ವರ ಸಮಿತಿಯನ್ನು ರಚಿಸಿದ್ದರು. ಆ ಸಮಿತಿ ಕೈಗೊಂಡ ಕೆಲವು ನಿರ್ಣಯಗಳಿಂದಲೇ ಇಂದು ದೇಶದಲ್ಲಿ ಮಾದರಿ ಸಹಕಾರಿ ಸಂಘಗಳು ಬೆಳೆದು ನಿಂತಿವೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.ಶುಕ್ರವಾರ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಸಂಗಮನಾಥ ಅರ್ಬನ್ ಸೌಹಾರ್ದ ಸಹಕಾರಿ ಸಂಘದ ಎರಡನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಸಹಕಾರ ಸಂಘಗಳು ಸ್ವಾವಲಂಬಿಗಳಾಗಿ ಬೆಳೆಯಬೇಕೆಂಬ ದೃಷ್ಟಿಯಿಂದ ಅರ್ಧನಾರೇಶ್ವರ ಎಂಬ ಸಮಿತಿಯನ್ನು ರಚಿಸಿದ್ದರು. ಮಾತ್ರವಲ್ಲ ಅದಕ್ಕೆ ಅರ್ಧನಾರೇಶ್ವರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ದೇಶದಲ್ಲಿ ಸಹಕಾರ ಕ್ಷೇತ್ರಗಳು ಅಭಿವೃದ್ಧಿ ಹೊಂದಿ ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಸಹಕಾರಿ ಚಳವಳಿಗೆ 120 ವರ್ಷಗಳ ಇತಿಹಾಸವಿದ್ದು, ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ. ದೇಶದಲ್ಲಿ ಸುಮಾರು 34 ಲಕ್ಷ ಕುಟುಂಬಗಳು ₹23 ಸಾವಿರ ಕೋಟಿ ಬಡ್ಡಿರಹಿತ ಸಾಲ ಪಡೆದಿವೆ ಎಂದ ಅವರು, ಸಹಕಾರಿ ಸಂಘಗಳ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳು ಸೇರಿದಂತೆ ಬಡವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಮ್ಮ ದೇಶ ಆರ್ಥಿಕ ಸಬಲತೆ ಗಳಿಸಲು ಸಾಧ್ಯವಾಗಿದೆ ಎಂದರು.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪಣ್ಣ ಸವದಿ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಗ್ರಾಮವಾದ ಕೆಂಪವಾಡದಲ್ಲೊಂದು ಸಂಗಮನಾಥ ಅರ್ಬನ್ ಸೌಹಾರ್ದ ಸಹಕಾರಿ ಸಂಘದ ಎರಡನೇ ಶಾಖೆ ಪ್ರಾರಂಭಿಸುವಂತೆ ಇಲ್ಲಿಯ ಹಲವಾರು ಸಹಕಾರಿ ಧುರೀಣರು ಮನವಿ ಮಾಡಿದ್ದರು. ಅವರ ಮಾತಿನಂತೆ ಇಂದು ಎರಡನೇ ಶಾಖೆಯನ್ನು ಪ್ರಾರಂಭಿಸಿದ್ದೇವೆ. ಈ ಸಂಸ್ಥೆಯಲ್ಲಿ ಯಾವುದೇ ಜಾತಿ, ಮತ, ಪಂಥ, ಪಕ್ಷವನ್ನು ತರದೆ ನಿಜವಾದ ಸಾಲಗಾರನಿಗೆ ಸಾಲ ನೀಡಬೇಕು. ಸರಿಯಾಗಿ ಮರುಪಾವತಿ ಮಾಡಲು ಶ್ರಮಿಸಬೇಕು. ಅಂದಾಗ ಆರ್ಥಿಕ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.
ಕವಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿ, ಪ್ರತಿಯೊಬ್ಬರು ತಾವು ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಈ ಸಂಸ್ಥೆಯಲ್ಲಿ ಇಡಿ. ನಿಮ್ಮ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತವೆ. ಮನುಷ್ಯ ಜೀವನದಲ್ಲಿ ಪ್ರತಿದಿನ ಎಷ್ಟು ಹಣ ಗಳಿಸುತ್ತಾನೆ ಎಂಬುದು ಮುಖ್ಯವಲ್ಲ. ಗಳಿಸಿದರಲ್ಲಿ ಎಷ್ಟು ಉಳಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈ ಸಂಸ್ಥೆ ನೂರಾರು ಶಾಖೆಗಳನ್ನು ಮಾಡಿ ಬಡವರಿಗೆ, ರೈತರಿಗೆ ಆರ್ಥಿಕ ಸಹಾಯ ಮಾಡಲಿ ಎಂದು ಆಶೀರ್ವದಿಸಿದರು.ಶಟ್ಟರ ಮಠದ ಶ್ರೀ ಮರುಳಶಂಕರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಮಲ್ಲೇಶ ಸವದಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪಣ್ಣ ಸವದಿ, ಉಪಾಧ್ಯಕ್ಷ ಶಂಕರ ವಾಘಮೋಡೆ, ಮಲಗೌಡ ಪಾಟೀಲ ಗ್ರಾಪಂ ಅಧ್ಯಕ್ಷೆ ಅಣ್ಣಪೂಣ್ಣಾ ಶೇಮಡೆ, ಮುಖಂಡರಾದ ಗುಳಪ್ಪ ಜತ್ತಿ, ಸೌರಭ ಪಾಟೀಲ, ವಿನಾಯಕ ಶಿವಾನಂದ ಗೋಲಭಾಂವಿ, ಬಾಗಡಿ, ಸಿದ್ದಪ್ಪ ಕನಾಳೆ, ಶಿವಾನಂದ ಹೊಸಮನಿ, ರಾಜಾರಾಮ ಗಡಗೆ, ಜ್ಯೋತಿಕುಮಾರ ಪಾಟೀಲ, ರಮೇಶ ಚೌಗಲಾ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
-----------ಕೋಟ್...
ಆಡಳಿತ ಮಂಡಳಿಯ ಪ್ರಾಮಾಣಿಕತೆ, ಸಿಬ್ಬಂದಿ ವರ್ಗದವರ ಸೇವಾನಿಷ್ಠೆ ಹಾಗೂ ಗ್ರಾಹಕರ ಪ್ರಾಮಾಣಿಕತೆ ಇದ್ದರೆ ಮಾತ್ರ ಇಂತಹ ಸಂಸ್ಥೆಗಳು ಬೆಳೆಯಲು ಸಾಧ್ಯ. ಈ ಸಂಸ್ಥೆಯವರು ಉತ್ತಮರಾಗಿದ್ದು, ಕೆಂಪವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪ್ರಾಮಾಣಿಕರಾಗಿರುವುದರಿಂದ ಸಂಗಮನಾಥ ಅರ್ಬನ್ ಸೌಹಾರ್ದ ಸಹಕಾರಿ ಸಂಘ ಉತ್ತರೋತ್ತರವಾಗಿ ಬೆಳೆಯುತ್ತದೆ ಎಂಬ ವಿಶ್ವಾಸವಿದೆ.- ಲಕ್ಷ್ಮಣ ಸವದಿ, ಮಾಜಿ ಡಿಸಿಎಂ, ಶಾಸಕ
--------------