ಸಾರಾಂಶ
ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿನ ಅನುದಾನ ನೀಡಿ ಇಲ್ಲಿನ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನವಲಗುಂದ: ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ. ಈ ಭಾಗದ ರಸ್ತೆಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು. ಈ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿಸಲು ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಅಪ್ಪಾಜಿ ಗಾರ್ಡನ್‌ನಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ₹48 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಈ ಭಾಗದ ಜನರ ಬಹು ದಿನಗಳ ರಸ್ತೆ ಬೇಡಿಕೆಗಳಿದ್ದವು. ಅವುಗಳಿಗೆ ಇದೀಗ ಶಿಲಾನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಅಗತ್ಯ ಬಿದ್ದರೆ ಇನ್ನೂ ಕೊಡುತ್ತೇವೆ. ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿನ ಅನುದಾನ ನೀಡಿ ಇಲ್ಲಿನ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿದರು.
ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, ಕ್ಷೇತ್ರವನ್ನು ಮಾದರಿಯನ್ನಾಗಿಸುವುದೇ ನನ್ನ ಗುರಿ. ಇದಕ್ಕೆ ಸರ್ಕಾರದ ಮುಖ್ಯಮಂತ್ರಿಗಳು, ಎಲ್ಲ ಸಚಿವರು ಸಹಕಾರ ನೀಡುತ್ತಿದ್ದಾರೆ ಎಂದರು.ಕೋನರಡ್ಡಿ ಜನ್ಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 196 ಜನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಉಚಿತ ನೇತ್ರ ತಪಾಸಣಾ ಶಿಬಿರವೂ ನಡೆಯಿತು.
ಗವಿಮಠದ ಬಸವಲಿಂಗ ಶ್ರೀಗಳು, ನಾಗಲಿಂಗಸ್ವಾಮಿಮಠದ ವೀರೇಂದ್ರ ಶ್ರೀಗಳು, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು ಸೇರಿದಂತೆ 20ಕ್ಕೂ ಮಠಾಧೀಶರು ಭಾಗವಹಿಸಿದ್ದರು. ಶಾಸಕ ಪ್ರಸಾದ ಅಬ್ಬಯ್ಯ, ವಿಶ್ವಾಸ ವೈದ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ವರ್ದಮಾನಗೌಡ್ರ ಹಿರೇಗೌಡ್ರ, ಸದುಗೌಡ ಪಾಟೀಲ, ಸೋಮಲಿಂಗಪ್ಪ ಬಳಿಗೇರ, ಪ್ರಕಾಶ ಶಿಗ್ಲಿ, ಮೋದಿನ ಶಿರೂರು, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಪರೀದಾಬೇಗಂ ಬಬರ್ಚಿ, ವಿಕಾಸ್ ತದ್ದೇವಾಡಿ ಸೇರಿದಂತೆ ಪುರಸಭೆ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.