ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಕಾನೂನಿನ ಅರಿವು ಮತ್ತು ಸಿಬ್ಬಂದಿಗಳಲ್ಲಿ ವೃತ್ತಿಪರತೆ ಮುಖ್ಯ. ಈ ತರಬೇತಿ ಪ್ರಯೋಜನ ಪಡೆದು ಸಂಘಗಳ ಪ್ರಗತಿಗೆ ಶ್ರಮಿಸಬೇಕು.

ಧಾರವಾಡ:

ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಕಾನೂನಿನ ಅರಿವು ಮತ್ತು ಸಿಬ್ಬಂದಿಗಳಲ್ಲಿ ವೃತ್ತಿಪರತೆ ಮುಖ್ಯ. ಈ ತರಬೇತಿ ಪ್ರಯೋಜನ ಪಡೆದು ಸಂಘಗಳ ಪ್ರಗತಿಗೆ ಶ್ರಮಿಸಲು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ನವಲಗುಂದದಲ್ಲಿ ನಡೆದ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿದ ಅವರು, ಅಡಳಿತ ಮಂಡಳಿ ಮತ್ತು ಸಿಇಒಗಳು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ತಿಳಿಯುವುದು ಅಗತ್ಯ. ಯೂನಿಯನ್‌ದಿಂದ ಜರುಗಿಸುವ ಇಂತಹ ತರಬೇತಿಗಳಿಂದ ಹೊಸ ಹೊಸ ವಿಷಯಗಳನ್ನು ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.

ನವಿಲುತೀರ್ಥದ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಸದಾಶಿವಗೌಡ ಪಾಟೀಲ, ಮಲಪ್ರಭಾ ನದಿ ವ್ಯಾಪ್ತಿಯ ಭೂಮಿಯು ಇಳಿಜಾರು ಅಥವಾ ಬದಿಯ ಜಲಾನಯನ ಪ್ರದೇಶದ ಪರಿಸರ, ಸಮತೋಲನ ಉತ್ತೇಜಿಸಲು ಮಣ್ಣು, ನೀರು ಮತ್ತು ಸಸ್ಯ ವರ್ಗಗಳನ್ನು ಪರಸ್ಪರ ಸಂರಕ್ಷಿಸುವ ಜಲಾನಯನ ಪ್ರದೇಶ ನಿರ್ವಹಣೆ ಮುಂಚೂಣಿಯಲ್ಲಿರುವ ತಾವೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಬಾಪೂಗೌಡ ಪಾಟೀಲ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್ ಜಿಲ್ಲೆಯ ಎಲ್ಲ ವರ್ಗದ ಸಹಕಾರ ಸಂಘಗಳಿಗೆ ಉತ್ತಮವಾಗಿ ತರಬೇತಿ ನೀಡುತ್ತಿವೆ. ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನಕ್ಕಾಗಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತರಬೇತಿಯ ಪ್ರಯೋಜನ ಪಡೆಯಬೇಕೆಂದರು.

ವಾಲ್ಮಿ ನಿರ್ದೇಶಕ ಗೀರಿಶ ಎನ್. ಮರಡ್ಡಿ, ಯಾವುದೇ ಸಹಕಾರ ಸಂಸ್ಥೆಯಲ್ಲಿ ಉತ್ತಮ ರೀತಿಯಿಂದ ಆಡಳಿತ ನಡೆಸಬೇಕಾದರೆ ಅಲ್ಲಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಸರಿಯಾದ ತರಬೇತಿ ಅವಶ್ಯಕ. ಅದ್ದರಿಂದ ಸಿಬ್ಬಂದಿ ತಮ್ಮ ಕೆಲಸದಲ್ಲಿ ನೈಪುಣ್ಯತೆ ಬೆಳೆಸಿಕೊಂಡು ಸಂಸ್ಥೆಗಳ ಅಭಿವೃದ್ದಿಗೆ ಶ್ರಮಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಯೂನಿಯನ್‌ ಅಧ್ಯಕ್ಷ ಯಲ್ಲಪ್ಪ ಹೆಬಸೂರ, ಜಲಸಂಪನ್ಮೂಲ ಅತ್ಯಮೂಲ್ಯ. ಸಸ್ಯ, ಪ್ರಾಣಿ, ಪಕ್ಷಿ, ಸೇರಿದಂತೆ ಎಲ್ಲ ಜೀವಿಗಳಿಗೂ ಅಗತ್ಯವಾಗಿ ಸಮರ್ಪಕವಾಗಿ ನೀರು ಬಳಸಿಕೊಂಡು ಹೋಗಲು ತಿಳಿಸಿದರು. ರೈತರು ನೀರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರಗತಿ ಹೊಂದಲು ಕರೆ ನೀಡಿದರು.

ಯೂನಿಯನ್‌ ನಿರ್ದೇಶಕರಾದ ಚಂಬಣ್ಣ ಹಾಳದೋಟರ, ಫಕ್ಕೀರಗೌಡ ಕಲ್ಲನಗೌಡ್ರ, ಶ್ರೀನಿವಾಸ ಬೂದಿಹಾಳ, ವಿ.ಎ. ಚಿಕ್ಕಮಠ, ವೀರಣ್ಣ ಚುಳಕಿ, ಶಿವಕುಮಾರ ಲಟ್ಟಿ ಮತ್ತಿತರರು ಇದ್ದರು.