ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಸದಾ ಶ್ರಮಿಸುತ್ತಿರುವ ಸಹಕಾರಿ ಮಹಾಮಂಡಳ ರೈತಾಪಿ ವರ್ಗದ ಬೆನ್ನೆಲುಬಾಗಿದೆ ಎಂದು ಸಹಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ವಿ.ನಾಗರಾಜ್ ತಿಳಿಸಿದರು.ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಏರ್ಪಡಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ದೇಶದ ಸಹಕಾರಿ ಚಳವಳಿಗೆ 120 ವರ್ಷಗಳ ಸುಧೀರ್ಘ ಇತಿಹಾಸವಿದೆ. ಪಂಡಿತ್ ಜವಹರಲಾಲ್ ನೆಹರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಸಹಕಾರ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತದೆ ಎಂದರು.
ಬಹುಸೇವಾ ಕೇಂದ್ರಗಳುಸಹಕಾರಿ ಸಂಸ್ಥೆಗಳು ಎಲ್ಲ ವಲಯಗಳನ್ನು ವ್ಯಾಪಿಸಿದ್ದು, ಶೇ100 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಈಗ ಬಹುಸೇವಾ ಕೇಂದ್ರಗಳಾಗಿ ಬದಲಾಗಿವೆ. ಹಾಲು ಉತ್ಪಾದಕ ಸಂಘಗಳು ಮತ್ತು ಮೀನುಗಾರಿಕೆ ವಲಯದಿಂದ ಉದ್ಯೋಗ ಸೃಷ್ಟಿ, ಗೋದಾಮುಗಳ ನಿರ್ಮಾಣ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಾಥಮಿಕ ಸಹಕಾರ ಸಂಘಗಳು ದೇಶದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡಿವೆ ಎಂದು ಹೇಳಿದರು.
ಸಹಕಾರಿ ಸಾಧಕರಿಗೆ ಸನ್ಮಾನಈ ವೇಳೆ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಭರಣಿ ವೆಂಕಟೇಶ್, ಹಿರಿಯ ಸಹಕಾರಿಗಳಾದ ಟಿ.ಎಚ್.ಕೃಷ್ಣಾರೆಡ್ಡಿ, ಆವುಲರೆಡ್ಡಿ, ರಾಮಸ್ವಾಮಿ, ವೆಂಕಟೇಶ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಎನ್. ನಾರಾಯಣಸ್ವಾಮಿ, ಜಿ.ಆರ್.ಶ್ರೀನಿವಾಸ್, ಆರ್.ಅಮರ್, ಲಕ್ಷ್ಮೀಪತಿ, ಕೆಂಪಣ್ಣ, ಎಚ್.ಎಸ್.ಮೋಹನ್‌ರೆಡ್ಡಿ, ಅಶ್ವತ್ಥಪ್ಪ, ವೆoಕಟರಮಣಪ್ಪ, ಟಿ.ಎನ್.ಶೈಲಜಾ, ಡಾ.ಶಂಕರ್, ಶ್ರೀನಿವಾಸ್‌ಗೌಡ, ಕೆ.ಎನ್.ನಾಗರಾಜ್, ಸಮನ್ವಯಾಧಿಕಾರಿ ಶಿವಕುಮಾರ್, ಸಿಇಒ ಅಮೃತಾ ಬಿಸನಾಳ್, ನಾಗಭೂಷಣ್, ವ್ಯವಸ್ಥಾಪಕ ಪ್ರದೀಪ್ ಮತ್ತಿತರರು ಇದ್ದರು.