ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಮತದಾರರಿಗೆ ಹಣ ಹಂಚಿ ನಿರ್ದೇಶಕನಾಗುವ ಭ್ರಷ್ಟ ವ್ಯವಸ್ಥೆಯಿಂದ ಸಹಕಾರಿ ಸಂಘಗಳು ಮತ್ತು ಸಹಕಾರಿ ಕ್ಷೇತ್ರ ಅವನತಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಅಥಣಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಅಥಣಿ ಇದರ ನವೀಕರಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಣ ಹೂಡಿಕೆ ಮಾಡಿ ಸಹಕಾರಿಯ ಕ್ಷೇತ್ರಕ್ಕೆ ಬಂದವನು ಇಲ್ಲಿ ಪಾರದರ್ಶಕತೆಯಿಂದ ಏನು ಮಾಡಬಲ್ಲ ಎಂಬುವುದನ್ನು ಒಮ್ಮೆ ಯೋಚಿಸಿ ನೋಡಿ. ಸಹಕಾರಿ ಸಂಘಗಳು ಮತ್ತು ಸಹಕಾರಿ ಕ್ಷೇತ್ರ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾದರೇ ಪ್ರಜ್ಞಾವಂತ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಸಹಕಾರಿಗಳನ್ನು ಬೆಂಬಲಿಸಬೇಕು ಎಂದು ಸಹಕಾರಿ ಸಂಘದ ರೈತರಿಗೆ ಮನವಿ ಮಾಡಿದರು.ಅಥಣಿ ಪಿ.ಎಲ್.ಡಿ ಬ್ಯಾಂಕ್ ಅನೇಕ ವರ್ಷಗಳಿಂದ ಸಂಕಷ್ಟದಲ್ಲಿದ್ದು, ಕಟ್ಟಡ ನವೀಕರಣಕ್ಕೂ ಹಣಕಾಸಿನ ಕೊರತೆ ಇತ್ತು. ನಾನು ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅನುದಾನ ಒದಗಿಸಿದಾಗ ಈ ಕಟ್ಟಡ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಈ ಪಿಎಲ್‌ಡಿ ಬ್ಯಾಂಕ್ ಅಭಿವೃದ್ಧಿ ಹೊಂದಬೇಕಾದರೇ ಆಡಳಿತ ಮಂಡಳಿಯ ಸದಸ್ಯರು ಮೊದಲು ತಾವು ಠೇವಣಿವಿಡುವ ಮೂಲಕ ತಾಲೂಕಿನ ರೈತರಿಂದ ಠೇವಣಿಗಳನ್ನ ಸಂಗ್ರಹಿಸಬೇಕು. ಸ್ವಾವಲಂಬಿ ಆರ್ಥಿಕ ವೈವಾಟುಗಳನ್ನು ನಡೆಸಲು ಸದೃಢ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಆರ್ಥಿಕ ನೆರವಿನಲ್ಲಿ ರೈತರಿಗೆ ಸಾಲದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಾರದರ್ಶಕ ಆಡಳಿತದೊಂದಿಗೆ ಮುನ್ನಡೆಸಬೇಕು. ರೈತರು ಕೂಡ ಪಡೆದುಕೊಂಡ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿ ಸಹಕಾರಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಆಡಳಿತ ಮಂಡಳಿಯ ಸದಸ್ಯರು ಪಾರದರ್ಶಕತೆಯಿಂದ ಆಡಳಿತ ನಡೆಸಿ ಬ್ಯಾಂಕಿನ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತೋಷ್ ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ಪ್ರಗತಿ ವರದಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕಿನ ಆರ್ಥಿಕ ನೆರವುನಿಂದ ಖರೀದಿಸಿದ ಟ್ರ್ಯಾಕ್ಟರ್ ಕೀಗಳನ್ನ ಶಾಸಕ ಲಕ್ಷ್ಮಣ ಸವದಿ ರೈತರಿಗೆ ವಿತರಿಸಿದರು. ಸಮಾರಂಭದ ಸಾನ್ನಿಧ್ಯವನ್ನು ಶೆಟ್ಟಿರ ಮಠದ ಮರಳುಸಿದ್ದ ಸ್ವಾಮೀಜಿ, ಜಮಖಂಡಿಯ ಒಲೆಮಠದ ಆನಂದ ದೇವರು, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ, ಉಪಾಧ್ಯಕ್ಷ ಭರತ ಮಾಳಿ, ನಿರ್ದೇಶಕರಾದ ಅಶೋಕ ಪಡನಾಡ, ಕಲಗೌಡ ಪಾಟೀಲ, ರವೀಂದ್ರ ಗಾಣಿಗೇರ, ವಿನಯ ಪಾಟೀಲ, ಅಪ್ಪಾಸಾಹೇಬ ವಾಘಮೋರೆ, ತಂಗೇವ್ವ ಖೋತ, ಮಹಾದೇವ ಮೇತ್ರಿ, ರಾಜಗೌಡ ಪಾಟೀಲ, ಮಾನಸಿಂಗ ಮಗರ, ಸತ್ಯಪ್ಪ ಬಿರಾದಾರ, ಶ್ರೀಶೈಲ ನಾಯಿಕ, ಸುಜಾತಾ ಖಡಕಿ, ಸೇರಿದಂತೆ ಬ್ಯಾಂಕಿ ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪಕ ರಾಜು ಬಂಡಿವಡ್ಡರ ಸ್ವಾಗತಿಸಿದರು. ಕುಮಾರ ನಾವ್ಹಿ ನಿರೂಪಿಸಿ, ವಂದಿಸಿದರು.ಸಹಕಾರಿ ಚಳುವಳಿಯ ಮೂಲ ಉದ್ದೇಶ ಹಾಳಾಗುತ್ತಿದ್ದು, ಸಹಕಾರಿ ಸಂಘಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿ ನಿರ್ದೇಶಕನಾದವರಿಂದ ಸಹಕಾರಿ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯವಿಲ್ಲ.
-ಲಕ್ಷ್ಮಣ ಸವದಿ, ಶಾಸಕರು.