ಸೌಹಾರ್ದ ಸಹಕಾರಿ ಸಂಘಗಳು ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಭಾಗದ ಜನರ ಜೀವನಾಡಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬರೂ ತಮ್ಮ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳನ್ನು ಸಹಕಾರಿ ಸಂಘಗಳ ಮೂಲಕವೇ ನಡೆಸುವ ಮೂಲಕ ಸಹಕಾರ ಚಳವಳಿಗೆ ಶಕ್ತಿ ತುಂಬಬೇಕು.
ಕನ್ನಡಪ್ರಭ ವಾರ್ತೆ ಸರಗೂರು
ರೈತರ ಸ್ವಾವಲಂಬಿ ಬದುಕು, ಗ್ರಾಮೀಣ ಆರ್ಥಿಕ ಸಬಲೀಕರಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಸೌಹಾರ್ದ ಸಹಕಾರಿ ಸಂಘಗಳು ಮಹತ್ತರ ಪಾತ್ರ ವಹಿಸುತ್ತಿದ್ದು, ಇಂತಹ ಸಂಘಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತೊಗಟವೀರ ನೇಕಾರ ಗುರುಪೀಠದ ದೊಡ್ಡಬಳ್ಳಾಪುರದ ತಪಸ್ಸಿಹಳ್ಳಿ ಪುಷ್ಪಾಂಡಜಮುನಿ ಆಶ್ರಮದ ಪೀಠಾಧಿಪತಿ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿಕರೆ ಕರೆ ನೀಡಿದರು.ಪಟ್ಟಣದಲ್ಲಿ ನೂತನವಾಗಿ ಆರಂಭವಾದ ತೊಗಟವೀರ ನೇಕಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸೌಹಾರ್ದ ಸಹಕಾರಿ ಸಂಘಗಳು ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಭಾಗದ ಜನರ ಜೀವನಾಡಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬರೂ ತಮ್ಮ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳನ್ನು ಸಹಕಾರಿ ಸಂಘಗಳ ಮೂಲಕವೇ ನಡೆಸುವ ಮೂಲಕ ಸಹಕಾರ ಚಳವಳಿಗೆ ಶಕ್ತಿ ತುಂಬಬೇಕು. ಸಹಕಾರ ಸಂಘಗಳನ್ನು ಬಲಪಡಿಸಿದರೆ ಸಮಾಜವೂ ಆರ್ಥಿಕವಾಗಿ ಸದೃಢವಾಗುತ್ತದೆ ಎಂದರು.ಬೆಂಗಳೂರು ಚೌಡೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಿ.ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಸ್ಪರ ಸಹಕಾರ, ನಂಬಿಕೆ ಹಾಗೂ ವಿಶ್ವಾಸವೇ ಸಹಕಾರಿ ಸಂಘಗಳ ಯಶಸ್ಸಿನ ಮೂಲವಾಗಿದೆ. ಆಡಳಿತ ಮಂಡಳಿ ಜವಾಬ್ದಾರಿಯಿಂದ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಹಕಾರಿ ಸಂಘ ಅಭಿವೃದ್ಧಿಯ ಶಿಖರ ತಲುಪಲು ಸಾಧ್ಯ ಎಂದರು.
ದೊಡ್ಡಬಳ್ಳಾಪುರದ ಪುಷ್ಪಾಂಡಜಮುನಿ ಆಶ್ರಮದ ಗುರುಕುಲ ಟ್ರಸ್ಟಿ ಅಚ್ಚಪ್ಪ ನಾಗರಾಜು ಮಾತನಾಡಿ, ಚೌಡೇಶ್ವರಿ ದೇವಸ್ಥಾನ ಪಕ್ಕದಲ್ಲಿರುವ ಶನೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ರು. ಒಂದು ಲಕ್ಷ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.ಅಧ್ಯಕ್ಷತೆ ವಹಿಸಿದ್ದ ತೊಗಟವೀರ ನೇಕಾರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿ. ಸುಬ್ಬರಾಮ್ ಮಾತನಾಡಿ, ಸಂಘವನ್ನು ಸದಸ್ಯರ ವಿಶ್ವಾಸದೊಂದಿಗೆ ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ತೊಗಟವೀರ ಕ್ಷತ್ರಿಯ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ಗೋವಿಂದಪ್ಪ (ಚಿತ್ರದುರ್ಗ), ಗುರುಕುಲ ಟ್ರಸ್ಟ್ ಕಾರ್ಯದರ್ಶಿ ಮುನಿರಾಜು, ಟ್ರಸ್ಟಿಗಳಾದ ಮೋಹನ್ ಕುಮಾರ್, ಶಿವಪ್ಪ, ಮೈಸೂರು–ಕೊಡಗು ಜಿಲ್ಲೆಗಳ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸುರೇಶ್, ಹಿರಿಯ ವಕೀಲ ಜಿ.ಎನ್. ನಾರಾಯಣಗೌಡ, ಕೃಷ್ಣರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಕೆ.ಆರ್. ಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ. ವಾಸು, ತೊಗಟವೀರ ಕ್ಷತ್ರಿಯ ಸಮಾಜದ ಯಜಮಾನರಾದ ಜಿ. ರಘುರಾಮ, ಅಧ್ಯಕ್ಷ ಎಚ್.ವಿ.ರಾಮಕೃಷ್ಣ, ಬಿ.ಎಚ್. ಬಾಬುರಾಜು, ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎಚ್.ವಿ. ಬಸವರಾಜ್, ನಿರ್ದೇಶಕರಾದ ಎಚ್.ವಿ. ರಂಗಸ್ವಾಮಿ, ಎಸ್.ಜಿ. ಪ್ರಕಾಶ್ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.