ಸಹಕಾರ ಸಂಘಗಳು ಬೆಳೆಯಲು ಅನುದಾನ ಕೊಡಿಸಬೇಕು. ಸಾಲ ವಸೂಲಿ, ಮರುಪಾವತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ಎಂ.ಗಣೇಶ್ ಪ್ರಸಾದ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸಹಕಾರ ಸಂಘಗಳು ಬೆಳೆಯಲು ಅನುದಾನ ಕೊಡಿಸಬೇಕು. ಸಾಲ ವಸೂಲಿ, ಮರುಪಾವತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ಎಂ.ಗಣೇಶ್ ಪ್ರಸಾದ್ ಸಲಹೆ ನೀಡಿದರು.ಪಟ್ಟಣದ ಲ್ಯಾಂಪ್ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಜಂಟಿಯಾಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳ ಬೆಳವಣಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಇಒಗಳ ಕೈಯಲ್ಲಿದೆ.ಸಾಲ ಕೊಡುವಾಗ ಪರಿಶೀಲನೆ ಮಾಡಿ,ವಸೂಲಿ ಮಾಡುವಾಗ ಹೆಚ್ಚಿನ ಗಮನ ಕೊಡಬೇಕು.ಹೀಗೆ ಮಾಡಿದರೆ ಸಹಕಾರ ಸಂಘಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ಕೆಲವು ಕಡೆ ಮರುಪಾವತಿ ಕಡಿಮೆ ಇದ್ದರೂ,ಸಾಲಕ್ಕಾಗಿ ಸಿಕ್ಕಾಪಟ್ಟೆ ಅರ್ಜಿಗಳು ಬರುತ್ತಲೇ ಇರುತ್ತವೆ.ಆದ್ದರಿಂದ ಸಾಲ ವಸೂಲಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಶಾಸಕರಿಗೆ ₹೨೦ ಕೋಟಿ ವಿವೇಚನ ಅನುದಾನಕ್ಕೆ ಸಿಎಂ ಒಪ್ಪಿಗೆ:ಶಾಸಕರ ಬಹುದಿನಗಳ ಬೇಡಿಕೆಯಾದ ಶಾಸಕರ ವಿವೇಚನ ಖೋಟಾದಡಿ ೨೦ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಶಾಸಕರಿಗೆ ವಿವೇಚನ ಕೋಟದಡಿ ಅನುದಾನ ಸರ್ಕಾರ ನೀಡಿದರೆ ಸಹಕಾರ ಸಂಘಗಳ ಕಟ್ಟಡಗಳು ಹಾಗೂ ದೇವಸ್ಥಾನಗಳಿಗೂ ಅನುದಾನ ನೀಡಲು ಅನುಕೂಲವಾಗುತ್ತದೆ ಆದಷ್ಟು ಬೇಗ ಶಾಸಕರ ವಿವೇಚನ ಖೋಟಾದಡಿ ಹಣ ಬರಲಿದೆ ಎಂದರು.ಸಹಕಾರ ಕ್ಷೇತ್ರದಲ್ಲಿ ದುಡಿಯುವವರಿಗೆ ಅನುಭವವೇ ಮಾರ್ಗದರ್ಶನ:
ಸಹಕಾರ ಕ್ಷೇತ್ರ ಅತ್ಯಂತ ಮಹತ್ವದ ಕ್ಷೇತ್ರ. ಈ ಕ್ಷೇತ್ರದಲ್ಲಿ ದುಡಿಯುವವರಿಗೆ ಅನುಭವವೇ ಮಾರ್ಗದರ್ಶನ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.ರಾಜ್ಯ ಸಹಕಾರ ಮಂಡಳ ಮತ್ತು ಜಿಲ್ಲಾ ಸಹಕಾರ ಒಕ್ಕೂಟಗಳ ಮುಖೇನ ಸಹಕಾರ ತರಬೇತಿ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು,ಸಿಇಒಗಳಿಗೆ ತರಬೇತಿ ನೀಡಲಾಗಿತ್ತು ಎಂದರು.
ಸಹಕಾರ ಚಳವಳಿಯ ಇತಿಹಾಸವನ್ನು ಸ್ಮರಿಸಿದ ಅವರು,೧೯೦೪-೦೫ ರಲ್ಲಿ ಬೆಳಗಾವಿ ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ ಹಿಂದುಳಿದ ವರ್ಗದ ಸಣ್ಣ ರಾಮೇಗೌಡರು ವ್ಯವಸಾಯ ಸೇವಾ ಸಹಕಾರ ಸಂಘವನ್ನು ಪ್ರಾರಂಭಿಸಿದರು.ಇಂದು ಅದು ದೇಶದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪನ್, ನಿರ್ದೇಶಕರಾದ ಜಿ.ಮಡಿವಾಳಪ್ಪ, ಮುದ್ದಯ್ಯ, ಎಂಸಿ ಡಿಸಿಸಿ ಬ್ಯಾಂಕ್ ಎಂಡಿ ಡಾ.ಶಂಕರ್, ಸಹಕಾರ ಅಭಿವೃದ್ಧಿ ಅಧಿಕಾರಿ ಸರ್ವಮಂಗಳ, ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಮನುಜ ಸೇರಿ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು,ಸಿಇಒ ಹಾಜರಿದ್ದರು.