ಬಡವರು ಮತ್ತು ಮಧ್ಯಮ ವರ್ಗದವರಿಗೆ ನೆರವಾಗುವಂತೆ ಸಹಕಾರಿ ಸಂಘಗಳು ಜನಪರವಾಗಿ ಸೇವೆ ಸಲ್ಲಿಸಬೇಕು

ಹೊಸಪೇಟೆ: ಬಡವರು ಮತ್ತು ಮಧ್ಯಮ ವರ್ಗದವರಿಗೆ ನೆರವಾಗುವಂತೆ ಸಹಕಾರಿ ಸಂಘಗಳು ಜನಪರವಾಗಿ ಸೇವೆ ಸಲ್ಲಿಸಬೇಕು ಎಂದು ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಮಹಾಸ್ವಾಮಿ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನ ಹೊಸಪೇಟೆಯ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘದಿಂದ ಬಂದ ಲಾಭದ ಸ್ವಲ್ಪ ಭಾಗವನ್ನು ಸಮಾಜಕ್ಕೂ ಹಂಚಬೇಕು. ಎಲ್ಲ ವರ್ಗದ ಜನರಿಗೆ ಅನುಕೂಲವಾಗವಂತೆ ಕಾರ್ಯನಿರ್ವಹಿಸಬೇಕು. ಸಹಕಾರಿ ಸಂಘಕ್ಕೆ ಶ್ರೀ ಶರಣ ಸಕ್ಕರೆ ಕರಡೀಶ ಅವರ ಹೆಸರು ಇಟ್ಟಿರುವುದು ಸಮಯೋಚಿತ ಆಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿ, ಸಹಕಾರಿ ಸಂಸ್ಥೆ ನಿಜಕ್ಕೂ ಆರ್ಥಿಕವಾಗಿ ಸುಭದ್ರವಾಗಿದೆ. ಠೇವಣಿ ಸಂಗ್ರಹಣೆಗೆ ಯಾವ ಕೊರತೆಯೂ ಇಲ್ಲ. ಸಾಲ ಮಂಜೂರಾತಿಯಲ್ಲಿ ಸರಳ ನಿಯಮಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆ ಸಲ್ಲಿಸುವಂತೆ ಅವರು ಹೇಳಿದರು.

ಎಸ್.ವಿ. ಸಂಕನೂರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಸಭೆಯಲ್ಲಿ ಮಾತನಾಡಿದರು.

ಸಂಡೂರಿನ ಪ್ರಭುದೇವರ ವಿರಕ್ತಮಠದ ಸ್ವಾಮೀಜಿಗಳಾದ ಪ್ರಭುಸ್ವಾಮಿಗಳು ಆಶೀರ್ವಚನ ನೀಡಿ ಸಭೆಯಲ್ಲಿ ಮಾತನಾಡಿದರು.

ಜಿ.ನೀಲಕಂಠಪ್ಪ ಬಳ್ಳಾರಿ ಶ್ರೇಷ್ಠ ಸಹಕಾರಿ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಕ್ಕಾಗಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಅವರು ರಚಿಸಿದ ‘ಶರಣ ಸಕ್ಕರೆ ಕರಡೆಪ್ಪನವರು ಪುಸ್ತಕವನ್ನು ಚಿತ್ತರಗಿ ಪೂಜ್ಯರು ಬಿಡುಗಡೆ ಗೊಳಿಸಿಸಿದರು.

ಎನ್. ಪುಷ್ಪಾ ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಷಾ ಭವರಲಾಲ್ ನಾಹರ್ ಬಿ.ಇಡಿ ಕಾಲೇಜಿನ ಅಧ್ಯಕ್ಷ ಗುಡೇಕೋಟೆ ನಾಗರಾಜ್ ವಂದಿಸಿದರು.