ಪರಸ್ಪರ ಸಹಕಾರದಿಂದ ಸಹಕಾರಿ ಯಶಸ್ವಿ

| Published : Aug 02 2024, 12:56 AM IST

ಸಾರಾಂಶ

ಬ್ಯಾಂಕಿನ ಸುದೀರ್ಘ ಅನುಭವ, ದಕ್ಷತೆ ಹಾಗೂ ನಿಸ್ವಾರ್ಥ ಸೇವೆ

ಗಜೇಂದ್ರಗಡ: ಪಟ್ಟಣದಲ್ಲಿ ಕಳೆದ ೪೬ ವರ್ಷಗಳಿಂದ ಸಾರ್ವಜನಿಕರ ಮತ್ತು ಸದಸ್ಯರ ಸಹಕಾರದಿಂದ ಪಾಂಡುರಂಗ ಪತ್ತಿನ ಸಹಕಾರಿ ಸಂಘವು ೨೦೨೩-೨೪ನೇ ಸಾಲಿನಲ್ಲಿ ₹೧೧ ಲಕ್ಷಕ್ಕೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಜಿತಕುಮಾರ ವಂದಕುದರಿ ಹೇಳಿದರು.

ಸ್ಥಳೀಯ ಪಾಂಡುರಂಗ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನಡೆದ ಸಂಘದ ೪೬ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.

ಸಹಕಾರಿಗಳ ನಡುವೆ ಪರಸ್ಪರ ನಂಬಿಕೆ ವಿಶ್ವಾಸವಿದ್ದಾಗ ಮಾತ್ರ ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ. ಈ ದೆಸೆಯಲ್ಲಿ ಪಾಂಡುರಂಗ ಪತ್ತಿನ ಸಹಕಾರಿ ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಬ್ಯಾಂಕಿನ ಸುದೀರ್ಘ ಅನುಭವ, ದಕ್ಷತೆ ಹಾಗೂ ನಿಸ್ವಾರ್ಥ ಸೇವೆಯಿಂದಲೇ ೪೬ ವರ್ಷ ಪೂರೈಸಲು ಸಾಧ್ಯವಾಗಿದ್ದು, ಲಾಭದಲ್ಲಿ ನೀಡುತ್ತಿರುವ ಡಿವಿಡೆಂಟನ್ನು ಸದಸ್ಯರಿಗೆ ಸದ್ಭಳಿಕೆ ಮಾಡಿಕೊಳ್ಳಬೇಕು ಎಂದರು.

ಉಪಾಧ್ಯಕ್ಷ ಶ್ರೀನಿವಾಸ ಅಂಬೋರೆ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಬ್ಯಾಂಕಿನಿಂದ ಸಾಲ ಪಡೆದ ಹಣವನ್ನು ಗ್ರಾಹಕರು ಸಮರ್ಪಕವಾಗಿ ಬಳಸಿಕೊಳ್ಳುವುದರ ಜತೆಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಅಂದಾಗ ಮತ್ತೊಬ್ಬ ಗ್ರಾಹಕರಿಗೆ ಸಾಲ ನೀಡಿ ಅವರ ಆರ್ಥಿಕ ಪ್ರಗತಿಗೆ ನೀವು ಸಹಕಾರ ನೀಡಿದಂತಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಟಕ್ಕೇದ ದರ್ಗಾದ ಹಜರತ್ ಸೈಯದ್ ನಿಜಾಮುದ್ಧೀನ ಶಾ ಮಕಾನದಾರ, ಸಹಕಾರವಿದ್ದರೆ ಸಂಘಗಳ ಬೆಳವಣಿಗೆ ಸಾಧ್ಯವಿದೆ. ೭೪ ಸದಸ್ಯರಿಂದ ಆರಂಭವಾದ ಸಂಘವು ಪ್ರಾರಂಭದಲ್ಲಿ ಶೇರು ಬಂಡವಾಳ ೧೦೯೩೦ ಹೊಂದಿ ೪೦೬೨ ಲಾಭ ಗಳಿಸಿತ್ತು. ಆದರೆ ಇಂದು ₹೧೯ಲಕ್ಷಕ್ಕೂ ಅಧಿಕ ಶೇರು ಬಂಡವಾಳ ಹೊಂದುವ ಮೂಲಕ ₹೯ಲಕ್ಷಕ್ಕೂ ಅಧಿಕ ಲಾಭ ಹೊಂದುವ ಮೂಲಕ ಪಟ್ಟಣದಲ್ಲಿ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಶಕ್ತಿ ಕೇಂದ್ರವಾಗಿ ನಿರ್ಮಾಣವಾಗಿದೆ ಎಂದರು.

ಬ್ಯಾಂಕಿನ ವ್ಯವಸ್ಥಾಪಕ ಆರ್.ಪಿ. ಹೋಳಗಿ, ನಿರ್ದೇಶಕ ಬಿ.ಕೆ.ಬೇಲೇರಿ, ಎನ್.ಡಿ. ಶಿನ್ನೂರ, ಎಂ.ಎಸ್. ಮಾಕನದಾರ, ವಿ.ಆರ್. ಜಾಧವ, ವಿ.ವೈ. ಮಾಂಡ್ರೆ, ಬಿ.ಸಿ. ಅಮಟೆ, ಎಸ್.ವಿ. ನಿಡಗುಂದಿ, ಮಲ್ಲಪ್ಪ ಮಳಗಿ, ಶರಣಪ್ಪ ರೇವಡಿ, ಸಂಗಪ್ಪ ಜಾಲಿಹಾಳ, ಮುತ್ತಣ್ಣ ಚಟ್ಟೇರ, ಜಿ.ಎಚ್. ರಂಗ್ರೇಜ, ಎಚ್.ಜಿ. ಮೋಮಿನ ಮತ್ತು ಈರಣ್ಣ ಯಂಕಂಚಿ, ಮುರ್ತುಜಾ ತಾಳಿಕೋಟಿ, ಗುರುನಾಥ ಯಂಕಂಚಿ, ಚಂದ್ರು ಕಿವುಡ ಜಾಡರ, ಬಿ.ಎಂ. ಮುಜಾವಾರ, ಪಿ.ಎಸ್. ಹೊಸಂಗಡಿ ಸೇರಿ ಇತರರು ಇದ್ದರು.