ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿದೇಶದಲ್ಲಿ ಸಹಕಾರಿ ವ್ಯವಸ್ಥೆ ಆರ್ಥಿಕ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಧೃಡವಾಗಿ ಬೆಳೆದ ಸಹಕಾರಿ ಸಂಸ್ಥೆಗಳು ಸಾಲಕ್ಕೆ ಕೈಚಾಚದೇ ಸ್ವಂತ ಬಂಡವಾಳವನ್ನು ಹೊಂದುವ ಮೂಲಕ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಕಡ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಸೋಮವಾರ ನೆರವೇರಿಸಿ ಮಾತನಾಡಿದ ಅವರು, ಆರಂಭದ ಹಂತವನ್ನು ಹೊರತು ಪಡಿಸಿ ಸಧೃಡವಾಗಿ ಬೆಳೆದ ನಂತರದಲ್ಲಿ ಸಹಕಾರಿ ಸಂಸ್ಥೆಗಳು ಸಾಲಕ್ಕೆ ಕೈಚಾಚದೇ ಸಂಸ್ಥೆಯ ಲಾಭದ ದೃಷ್ಟಿಯಿಂದ ಸ್ವಂತ ಬಂಡವಾಳವನ್ನು ಹೊಂದುವ ಪ್ರಯತ್ನ ಮಾಡಬೇಕಿದೆ ಎಂದರು.ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಆರ್ಥಿಕ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕಿದ್ದ ಕಾಲಘಟ್ಟದಲ್ಲಿ ಸಹಕಾರಿ ವ್ಯವಸ್ಥೆ ಭಾರತದಲ್ಲಿ ಮೈಕ್ರೋಫೈನಾನ್ಸ್ ಮೂಲಕ ಕೆಳಮಟ್ಟದ ಆರ್ಥಿಕತೆಯನ್ನು ಎತ್ತಿ ಹಿಡಿದ ಪರಿಣಾಮ ದೇಶದ ಆರ್ಥಿಕ ಸಂಕಷ್ಟವನ್ನು ನಿವಾರಿಸುವಲ್ಲಿ ಸಹಕಾರಿ ವ್ಯವಸ್ಥೆ ಯಶಸ್ವಿಯಾಗಿದೆ ಎಂದರು.ಸಾಲ ಪಡೆಯುವವರು ಗೊತ್ತು ಗುರಿ ಇಲ್ಲದೇ ಸಾಲ ಮಾಡುವ ಮುನ್ನ ಸಾಲದ ಅವಶ್ಯಕತೆಯನ್ನು ಮನನ ಮಾಡಿಕೊಳ್ಳಬೇಕು. ಮುಖ್ಯವಾಗಿ ಸಹಕಾರಿ ವ್ಯವಸ್ಥೆ ನಮ್ಮದು ಎಂಬ ಭಾವನೆಯನ್ನು ಹೊಂದುವುದು ಅಗತ್ಯ. ರೈತರು ಶ್ರೀ ಸಾಮಾನ್ಯರಿಗೆ ಶಕ್ತಿ ತುಂಬಲು ಬೆಂಬಲವಾಗಿ ನಿಂತಿರುವ ಸಹಕಾರಿ ವ್ಯವಸ್ಥೆ ದೇಶದ ಆರ್ಥಿಕ ವ್ಯವಸ್ಥೆಗೂ ಭದ್ರ ಬುನಾದಿಯಾಗಿದೆ. ಮುಖ್ಯವಾಗಿ ಸಹಕಾರಿ ವ್ಯವಸ್ಥೆ ನಮ್ಮದು ಎಂಬ ಭಾವನೆಯನ್ನು ಹೊಂದುವುದು ಅಗತ್ಯ ಎಂದೂ ಹೇಳಿದರು.ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜಾತಿ ಪಕ್ಷ ಮತ್ತು ರಾಜಕಾರಣ ಈ ಮೂರು ವಿಚಾರಗಳಿಂದ ಮುಕ್ತರಾಗಿರಬೇಕು. ರೈತರ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಸಾಲ ನೀಡಿಕೆಯ ನಿಭಂದನೆಯನ್ನು ಮೀರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಬ್ಯಾಂಕಿನಿಂದ ಸಾಲ ನೀಡಿದ್ದರೂ ಅಂತಹಾ ಸಂಸ್ಥೆಯ ಪದಾಧಿಕಾರಿಗಳಿಂದ ವಿರೋಧ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಆಲೋಚನೆ ಮಾಡುವಂತಾಗಿದೆ ಎಂದೂ ಮಾರ್ಮಿಕವಾಗಿ ನುಡಿದರು.ಕಡ್ತೂರು ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅನಿವಾಸಿ ಭಾರತೀಯರ ಸಂಘದ ಉಪಾಧ್ಯಕ್ಷೆ ಆರತಿ ಕೃಷ್ಣ, ಎಚ್.ಎನ್. ವಿಜಯದೇವ್, ಕಡ್ತೂರು ದಿನೇಶ್, ಕೇಳೂರು ಮಿತ್ರಾ, ಕಾರ್‍ಬೈಲ್ ರಮೇಶ್ ಹಾಗೂ ಅನ್ನಪೂರ್ಣ ಮೋಹನ್ ಇದ್ದರು.