ಸಾರಾಂಶ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಸಹಕಾರ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕ್ ಗಳಂತೆ ಎಲ್ಲ ಸೇವೆ ಒದಗಿಸಲು ಮುಂದಾದರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದು ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.ಪಟ್ಟಣದ ಶಂಕರಲಿಂಗ ಕಾರ್ಯಾಲಯದಲ್ಲಿ ಈಚೆಗೆ ಜರುಗಿದ ಪೀಪಲ್ಸ್ ಕೋ ಆಫ್ ಸೊಸೈಟಿ ದಶಮಾನೋತ್ಸವ ಹಾಗೂ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಸ್ವಾರ್ಥ ರಹಿತ ಚಟುವಟಿಕೆಗಳು ನಡೆದಾಗ ಸಂಸ್ಥೆಯ ಪ್ರಗತಿ ಕಂಡು ಬರುತ್ತದೆ. ಈ ನಿಟ್ಟಿಲ್ಲಿ ಪೀಪಲ್ಸ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಅಮರ ನಲವಡೆ ಮಾತನಾಡಿ, ಸಹಕಾರ ಸಂಸ್ಥೆ ನಡೆಸುವುದು ಇಂದಿನ ದಿನಗಳಲ್ಲಿ ಕಷ್ಟವಾಗಿದ್ದು, ಆಡಳಿತ ಮಂಡಳಿಯ ಜಾಗೃತಿ, ಸಿಬ್ಬಂದಿ ಪರಿಶ್ರಮ ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪವನ ಕಣಗಲಿ ಅವರ ಮಾರ್ಗದರ್ಶನದಲ್ಲಿ ಸಂಘವೂ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಸಂಘದ ಅಧ್ಯಕ್ಷೆ ಶಹನಾಜ್ ಗಡೇಕಾಯಿ ಮಾತನಾಡಿ, ಸಂಘ ಕಳೆದ ವಾರ್ಷಿಕ ವರ್ಷದಲ್ಲಿ ₹5.30 ಕೋಟಿ ಠೇವು ಸಂಗ್ರಹದ ಮೂಲಕ ₹10 ಲಕ್ಷಕ್ಕೂ ಅಧಿಕ ಲಾಭ ಹೊಂದಿದೆ. ಸದಸ್ಯರಿಗೆ ಶೇ.12 ರಷ್ಟು ಲಾಭಾಂಶ ನೀಡುತ್ತಿದ್ದು, ಸಂಸ್ಥೆ ಯಾವತ್ತೂ ಗ್ರಾಹಕರ ಮತ್ತು ಸದಸ್ಯರ ವಿಶ್ವಾಸ ಕಾಪಾಡಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಶ್ಯಾಮಲಿಂಗ ಹಾಲಟ್ಟಿ ವಾರ್ಷಿಕ ವರದಿ ಮಂಡಿಸಿ ವಿಷಯಗಳಿಗೆ ಅನುಮೋದನೆ ಪಡೆದರು. ಸಂಘದ ನಿರ್ದೇಶಕ ಪವನ ಕಣಗಲಿ ಮಾತನಾಡಿ, ಯಾವುದೇ ಸಂಸ್ಥೆ ಆರಂಭದ ಸಮಯದಲ್ಲಿ ಆಗುವ ತೊಂದರೆ ತಾಪತ್ರೆಯಗಳನ್ನು ಯಶಸ್ವಿಯಾಗಿ ಎದುರಿಸಿ ಪರಿಹರಿಸಿದಾಗ ಬೆಳವಣಿಗೆ ಸಾಧಿಸುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸಂಘದ ಪ್ರಗತಿಯಲ್ಲಿ ಪಾಲುದಾರರಾಗಿದ್ದಾರೆ ಎಂದರು.ಸಂಸ್ಥೆಯ ಸಂಸ್ಥಾಪಕ ಪ್ರಕಾಶ ಕಣಗಲಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಸಹಕಾರಿ ಸಂಸ್ಥೆ ಪದಾಧಿಕಾರಿಗಳಾದ ಶ್ರೀಕಾಂತ ಹತನೂರಿ, ಶಾಂತಿನಾಥ ಖಾನಾಪೂರೆ, ಸಂಜಯ ಶಿರಕೋಳಿ, ಸಂಸ್ಥೆ ಉಪಾಧ್ಯಕ್ಷ ಚಿದಾನಂದ ಇಂಡಿ, ನಿರ್ದೇಶಕರಾದ ಪವನ ಕಣಗಲಿ, ಆನಂದ ಹಾಲದೇವರಮಠ, ಸೂರ್ಯಕಾಂತ ಖಾಡೆ, ಸಚಿನ್ ಸಪಾಟೆ, ಶೀತಲ ಚೋರಗೆ, ಶಿವಗೌಡ ಪಾಟೀಲ, ಕಪೀಲ ಕೋಳೆಕರ, ಸುರೇಶ ನಾಯಿಕ, ಸಾಗರ ಗೋಂಧಳಿ, ವಿಲಾಸ ಹಿರೇಮನಿ ಸೇರಿದಂತೆ ಇತರರು ಇದ್ದರು.