ದಾವಣಗೆರೆ: ಪ್ರಕರಣಗಳ ವಿಲೇವಾರಿಯಲ್ಲಿ ಇಲಾಖೆಗಳ ಸಮನ್ವಯ ಅಗತ್ಯ : ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ

| Published : Sep 03 2024, 01:50 AM IST / Updated: Sep 03 2024, 05:10 AM IST

ಸಾರಾಂಶ

ಪ್ರಕರಣಗಳ ಶೀಘ್ರ ವಿಲೇವಾರಿ ಮತ್ತು ತನಿಖೆಯಲ್ಲಿನ ಲೋಪಗಳನ್ನು ಸರಿಪಡಿಸಲು ನ್ಯಾಯಾಂಗ, ಅಭಿಯೋಜನೆ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

 ದಾವಣಗೆರೆ :  ಪ್ರಕರಣಗಳ ಶೀಘ್ರ ವಿಲೇವಾರಿ, ತನಿಖೆಯಲ್ಲಿ ತನಿಖಾಧಿಕಾರಿಗಳಿಂದ ಆಗುವ ಲೋಪ ಸರಿಪಡಿಸಿಕೊಳ್ಳಲು, ನೊಂದವರಿಗೆ ನ್ಯಾಯ ಒದಗಿಸಲು ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅಧ್ಯಕ್ಷತೆಯಲ್ಲಿ ನಡೆದ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆಗಳ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕ್ರಿಮಿನಲ್ ಜಸ್ಟೀಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮೂರು ಇಲಾಖೆಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು.

ಪೊಲೀಸ್‌, ಅಭಿಯೋಜಕರು ಹಾಗೂ ನ್ಯಾಯಾಧೀಶರ ಮೇಲೆ ತುಂಬಾ ಜವಾಬ್ಧಾರಿ ಇರುತ್ತದೆ. ನಾವೇ ತಪ್ಪು ಮಾಡಿದರೆ ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಿಂದ ಯಾವುದೇ ತಪ್ಪಾಗಬಾರದು. ಈ ಸಭೆಯಲ್ಲಿ ನಾವು ಚರ್ಚಿಸುವುದರಿಂದ ನಮ್ಮಲ್ಲಿರುವ ಜ್ಞಾನ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಕಾರ್ಯ ದಕ್ಷತೆ ಹೆಚ್ಚುತ್ತದೆ. ಪ್ರಕರಣಗಳ ಶೀಘ್ರ ವಿಲೇ, ತನಿಖೆಯಲ್ಲಿ ತನಿಖಾಧಿಕಾರಿಗಳಿಂದಾಗುವ ಲೋಪ ಸರಿಪಡಿಸಿಕೊಳ್ಳಲು, ನೊಂದವರಿಗೆ ನ್ಯಾಯ ದೊರಕಿಸಕೊಡುವ ನಿಟ್ಟಿನಲ್ಲಿ ಮೂರೂ ಇಲಾಖೆಗಳ ಸಮನ್ವಯತೆ ಅತ್ಯಗತ್ಯ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಮನ್ವಯ ಸಭೆ ಉದ್ದೇಶ ಈಡೇರಿದಾಗ ಮಾತ್ರ ಸಭೆಗೆ ಮಹತ್ವ ಬರುತ್ತದೆ. ಹೊಸ ಹೊಸ ಕಾನೂನು ಬಂದಿದ್ದು, ಅವುಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾಗಿದೆ. ಈಚಿನ ದಿನಗಳಲ್ಲಿ ಡಿಜಿಟಲ್ ಎವಿಡೆನ್ಸ್ ಹೇಗೆ ಸಂಗ್ರಹಿಸಬೇಕು, ನ್ಯಾಯಾಲಯಗಳಿಗೆ ಸಲ್ಲಿಸುವ ಬಗ್ಗೆ ಅರಿವು ಇರುವುದು ತುಂಬಾ ಅವಶ್ಯಕ. ನಾವು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದಾಗ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್, 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಭೆಯಲ್ಲಿ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್, ಹಿರಿಯ ಕಾನೂನು ಅಧಿಕಾರಿ ಬಸವರಾಜ, 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀ ಪ್ರವೀಣಕುಮಾರ, ನ್ಯಾಯಾಧೀಶರಾದ ಶ್ರೀ ಶ್ರೀರಾಮ ನಾರಾಯಣ ಹೆಗಡೆ, ನಿವೇದಿತಾ, ಎಚ್.ಕೆ.ರೇಷ್ಮಾ, ಅಧ್ಯಕ್ಷರು, ಬಾಲ ನ್ಯಾಯ ಮಂಡಳಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು. ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಸೇರಿದಂತೆ ಅಧಿಕಾರಿಗಳು ಇದ್ದರು.

ಸರ್ಕಾರಿ ಅಭಿಯೋಜಕ ಮಂಜುನಾಥ, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಬಿ.ಎಸ್.ಬಸವರಾಜ ಕಾರ್ಯಕ್ರಮ ನಡೆಸಿಕೊಟ್ಟರು. ಪೊಲೀಸ್ ಅಧಿಕಾರಿ, ಪ್ರಾಸಿಕ್ಯೂಟರ್ಸ್ ಹಾಗೂ ನ್ಯಾಯಾಧೀಶರು ಪ್ರಕರಣಗಳ ಆರಂಭದಿಂದ ಅಂತಿಮ ಘಟ್ಟದ ವರೆಗೂ ಬರುವ ವಿವಿಧ ಹಂತಗಳಲ್ಲಿ ಉಂಟಾಗುವ ಲೋಪದೋಷಗಳ ಬಗ್ಗೆ, ಕಾರ್ಯವ್ಯಾಪ್ತಿ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು,

ಟಾಪ್‌ ಕೋಟ್‌ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಇಲಾಖೆಗಳ ನಡುವೆ ಆಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಇಂದು ಹಮ್ಮಿಕೊಂಡಿರುವ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆಯು ತುಂಬಾ ಉಪಯುಕ್ತವಾಗಿದೆ ಹಾಗೂ ತುಂಬಾ ಅವಶ್ಯಕವಾಗಿದೆ

- ಮಹಾವೀರ ಕರೆಣ್ಣವರ, ನ್ಯಾಯಾಧೀಶ