ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಏನಾದರೊಂದು ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ನನ್ನಲ್ಲಿದೆ. ಅದು ಸಾಧ್ಯವಾಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಇರಬೇಕಿರುವುದು ಬಹಳ ಮುಖ್ಯ. ಪರಸ್ಪರರನ್ನು ತೆಗಳುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನಗರದ ಪೇಟೆಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿ, ಹಿಂದೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸ್ಥಾಪಿಸಿದ ಎಚ್‌ಎಂಟಿ, ಬಿಎಚ್‌ಇಎಲ್, ಎನ್‌ಜಿಎಫ್, ಐಟಿಐನಂತಹ ೪೨ ಸಾರ್ವಜನಿಕ ಉದ್ದಿಮೆಗಳಲ್ಲಿ ಉಳಿದುಕೊಂಡಿರುವುದು ಬಿಎಚ್‌ಇಎಲ್ ಮಾತ್ರ. ನಾನು ಕೇಂದ್ರ ಸಚಿವನಾದ ಬಳಿಕ ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ವಹಿಸುತ್ತಿದ್ದೇನೆ. ಅದೇ ರೀತಿ ಭದ್ರಾವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗೂ ಕಾಯಕಲ್ಪ ನೀಡಲಾಗಿದ್ದು ಇನ್ನೊಂದು ವಾರದಲ್ಲಿ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು.
ಕೈಗಾರಿಕೆಗಳ ಸ್ಥಾಪನೆಗೆ ಜಾಗದ ಕೊರತೆ ತುಂಬಾ ಇದೆ. ರಾಜ್ಯ ಸರ್ಕಾರ ಜಾಗ ಗುರುತಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಅದನ್ನು ಬಿಟ್ಟು ಪರಸ್ಪರ ನಿಂದಿಸಿಕೊಂಡು ಕುಳಿತರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.ಆಂಧ್ರ ಪ್ರದೇಶದಲ್ಲಿ ೧೩ ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡುತ್ತಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರದ ನಡುವೆ ಅಲ್ಲಿ ಸಮನ್ವಯತೆ ಇರುವುದರಿಂದ ಅದು ಸಾಧ್ಯವಾಗಿದೆ. ನಾನು ಕೇಂದ್ರ ಸಚಿವನಾಗಿ ಎಲ್ಲವನ್ನೂ ತರಬಹುದೆಂಬುದು ಹಲವರ ಭಾವನೆಯಾಗಿದೆ. ಆದರೆ, ರಾಜ್ಯ ಸರ್ಕಾರವೂ ಅದಕ್ಕೆ ಪೂರಕವಾಗಿ ಸಹಕರಿಸಬೇಕು. ಪಕ್ಷ ಯಾವುದೇ ಇರಲಿ. ಅಭಿವೃದ್ಧಿಯಲ್ಲಿ ಸಮನ್ವಯತೆಯಿದ್ದಾಗ ಪ್ರಗತಿದಾಯಕ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯ. ಕರ್ನಾಟಕದಲ್ಲಿ ಅಂತಹ ವಾತಾವರಣವಿಲ್ಲ ಎಂದು ನುಡಿದರು.
ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಜಿಲ್ಲೆಯ ಜನರು ಸಂಸತ್ತಿಗೆ ಕಳುಹಿಸಿದರು. ಜನರ ಆಶೀರ್ವಾದದಿಂದ ಕೇಂದ್ರ ಕೈಗಾರಿಕೆ ಸಚಿವನೂ ಆಗಿದ್ದೇನೆ. ಜಿಲ್ಲೆಯ ಜನರ ಋಣದ ಭಾರ ನನ್ನ ಮೇಲಿದೆ. ಇನ್ನೂ ಮೂರು ವರ್ಷ ಕಾಲಾವಕಾಶ ಇರುವುದರಿಂದ ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಿಮ್ಮೊಂದಿಗೆ ಇದ್ದು ಏನಾದರೊಂದು ಕೊಡುಗೆ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.ಜಿಲ್ಲೆಯ ಯುವಕರು ಇರುವ ಸ್ಥಳದಲ್ಲೇ ಉದ್ಯೋಗ ಬಯಸಿದರೆ ಸಿಗುವುದು ಕಷ್ಟ. ಚೆನ್ನೈ, ಮುಂಬೈ, ಪಕ್ಕದ ಹೊಸೂರು ಇಲ್ಲೆಲ್ಲಾ ದೊಡ್ಡ ದೊಡ್ಡ ಕಾರ್ಖಾನೆಗಳು, ಕೈಗಾರಿಕೆಗಳಿವೆ. ಅಲ್ಲಿಗೆ ಹೋಗಿ ಬೆಳವಣಿಗೆ ಸಾಧಿಸಬೇಕು. ಈಗ ಉತ್ತರ ಭಾರತದವರು ದಕ್ಷಿಣದವರೆಗೂ ಉದ್ಯೋಗವನ್ನರಸಿಕೊಂಡು ಬರುತ್ತಿದ್ದಾರೆ. ಇಲ್ಲಿನವರು ಉದ್ಯೋಗವನ್ನರಸಿ ಬೇರೆಡೆಗೆ ಹೋಗದಿರುವುದು ಬೇಸರದ ಸಂಗತಿ ಎಂದರು.
ಗೊಂದಲವಿಲ್ಲದೆ ಹಂಚಿಕೆ ಮಾಡಿ:ನೂತನವಾಗಿ ನಿರ್ಮಿಸಿರುವ ಮಾರುಕಟ್ಟೆಯ ಅಂಗಡಿ ಮಳಿಗೆಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಹಂಚಿಕೆ ಮಾಡಬೇಕು. ಕಷ್ಟಪಟ್ಟು ಜೀವನ ನಡೆಸುವವರಿಗೆ ಮೊದಲ ಆದ್ಯತೆ ನೀಡಿ. ಹಿಂದೆ ಮಾರುಕಟ್ಟೆಯಲ್ಲಿದ್ದವರಿಗೇ ಮಳಿಗೆಗಳನ್ನು ನೀಡಲು ತೀರ್ಮಾನಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದು ಹಂಚಿಕೆಯಲ್ಲಿ ಸಮಸ್ಯೆಗಳು ಸೃಷ್ಟಿಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.
ಶೀಘ್ರ ಮಳಿಗೆಗಳ ಹಂಚಿಕೆ:ಶಾಸಕ ಪಿ.ರವಿಕುಮಾರ್ ಮಾತನಾಡಿ, ನೂತನ ತರಕಾರಿ ಮಾರುಕಟ್ಟೆಯ ಅಂಗಡಿ ಮಳಿಗೆಗಳನ್ನು ಶೀಘ್ರವಾಗಿ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಪಟ್ಟಿ ರೆಡಿ ಇದೆ. ಅವರಿಗೇ ಮಳಿಗೆಗಳನ್ನು ನ್ಯಾಯಯುತವಾಗಿ ಹಂಚಿಕೆ ಮಾಡಲಾಗುವುದು. ಯಾವುದೇ ಒತ್ತಡ, ಪ್ರಭಾವಕ್ಕೆ ಇಲ್ಲಿ ಅವಕಾಶವಿರುವುದಿಲ್ಲ. ಮುಂದಿನ ಹದಿನೈದು ದಿನದಲ್ಲಿ ಮಾರುಕಟ್ಟೆ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಬೆಳವಣಿಗೆ ಸಲುವಾಗಿ ನೂರು ಎಕರೆ ಜಾಗವನ್ನು ನೀಡಲು ಸಿದ್ಧರಿದ್ದೇವೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಕೈಗಾರಿಕೆಯನ್ನು ತಂದುಕೊಟ್ಟು ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಮನವಿ ಮಾಡಿದ ಅವರು, ಎಲ್ಲಾ ಕಾಲದಲ್ಲೂ ರಾಜಕೀಯ ಮಾಡದೆ, ಅಭಿವೃದ್ಧಿಗೆ ಪ್ರಧಾನ ಆದ್ಯತೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಆಯುಕ್ತೆ ಯು.ಪಿ.ಪಂಪಾಶ್ರಿ, ಮುಡಾ ಅಧ್ಯಕ್ಷ ನಹೀಂ, ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ನಗರ ಘಟಕದ ಅಧ್ಯಕ್ಷ ವಸಂತಕುಮಾರ್ ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.ತರಕಾರಿ ಮಾರುಕಟ್ಟೆಗೆ ೧೦.೨೦ ಕೋಟಿ ರು. ವೆಚ್ಚ: ಎಂ.ವಿ.ಪ್ರಕಾಶ್
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಪೇಟೆ ಬೀದಿಯಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ೧೦.೨೦ ಕೋಟಿ ರು. ವೆಚ್ಚ ಮಾಡಿರುವುದಾಗಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಹೇಳಿದರು.
ಜಯಚಾಮರಾಜೇಂದ್ರ ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿ, ೧೯೫೧ರಲ್ಲಿ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಮಾರುಕಟ್ಟೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ೧೯೬೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಡಿ.ಜತ್ತಿ ಉದ್ಘಾಟಿಸಿದ್ದರು. ಸುಮಾರು ೭೦ ವರ್ಷಗಳಿಗೂ ಹೆಚ್ಚು ಅವಧಿ ಪೂರೈಸಿದ್ದ ಮಾರುಕಟ್ಟೆ ಶಿಥಿಲಗೊಂಡಿತ್ತು. ಮೂಲ ಸೌಲಭ್ಯಗಳಿಲ್ಲದೆ ಜನರಿಗೆ ತೊಂದರೆಯಾಗಿತ್ತು ಎಂದರು.ನಂತರದಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ಮುಂದಾದೆವು. ೧೧೭ ಮಳಿಗೆಗಳನ್ನು ನಿರ್ಮಿಸಲಾಗಿದೆ. ವಿದ್ಯುತ್, ಶೌಚಾಲಯ, ಕಾಂಪೌಂಡ್ ಸೇರಿದಂತೆ ಇತರೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಮಳಿಗೆ ಮೇಲೆ ಮೊದಲನೇ ಮತ್ತು ಎರಡನೇ ಮಹಡಿ ನಿರ್ಮಾಣ ಮಾಡಬೇಕಿದ್ದು, ಅದಕ್ಕೆ ಪೂರಕವಾದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರಕಿಸಿಕೊಡುವಂತೆ ಸಚಿವರು, ಶಾಸಕರಲ್ಲಿ ಮನವಿ ಮಾಡಿದರು.