ಕನ್ನಡಪ್ರಭ ವಾರ್ತೆ ರಾಮನಾಥಪುರ
ಉತ್ತರಾದಿ ಮಠದಲ್ಲಿ ಶ್ರೀಗುರು ರಾಘವೇಂದ್ರಸ್ವಾಮಿಗಳವರ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಕಾವೇರಿ ನದಿದಂಡೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯ, ಉತ್ಸವಾದಿಗಳು ಪ್ರಾರಂಭವಾದವು.ರಾಮನಾಥಪುರದ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾದಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ಬಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅಲ್ಲದೇ ಬೃಂದಾವನಕ್ಕೆ ವಿಶೇಷ ಹಾಗೂ ಮನಮೋಹಕ ಹೂವಿನ ಅಲಂಕಾರ ಭಕ್ತರ ಮನ ಸೆಳೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಅಗಮಿಸಿ ಭಕ್ತಿಭಾವದಿಂದ, ಆರತಿ ದೀಪ ಬೆಳಗಿಸಿ ಗುರುರಾಯರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿಯ ಶ್ರೀ ರಾಘವೇಂದ್ರಸ್ವಾಮಿ ಉತ್ತರಾದಿ ಮಠದಲ್ಲಿ ಶ್ರೀ ರಾಘವೇಂದ್ರ ವೈಭವೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ವರ್ಧಂತ್ಯುತ್ಸವ ಕಾರ್ಯಕ್ರಮಗಳು, 5 ದಿನಗಳು ಶ್ರೀಸೀತಾರಾಮಾಂಜನೇಯ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಸಾಯಂಕಾಲ ರಥೋತ್ಸವ ಮಹಾಮಂಗಳಾರತಿ ನಡೆಯುತ್ತಿದ್ದು, ಪ್ರತಿನಿತ್ಯ ಎಲ್ಲ ಭಕ್ತರು ಪಾಲ್ಗೊಂಡು ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇ. ಕನಕಾಚಾರ್ಯರು ವಿನಂತಿಸಿದ್ದಾರೆ.