ಸಾರಾಂಶ
ಚಾಮರಾಜನಗರದಲ್ಲಿ ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಭಾರತ ಬಿಟ್ಟು ತೊಲಗಿ ಚಳವಳಿಯ ೮೩ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಸ್. ಕೆ. ಎಂ., ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿಕರೆಯ ಮೇರೆಗೆ ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿಯಲ್ಲಿ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜನನ ಮಂಟದ ಬಳಿ ಇರುವ ಜಿಲ್ಲಾ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಾರ್ಪೊರೇಟ್-ಕೋಮುವಾದಿ ಧೋರಣೆಗಳಿಂದಾಗಿ ದೇಶದ ದುಡಿಯುವ ಜನತೆ ಅಪಾರ ಪ್ರಮಾಣದ ಸಂಕಟವನ್ನು ಅನುಭವಿಸುವಂತಾಗಿದೆ. ದಿವಾಳಿಕೋರ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳು ರೈತರ, ಕಾರ್ಮಿಕರ, ದಲಿತರ, ಮಹಿಳೆಯರ ,ವಿದ್ಯಾರ್ಥಿ ಯುವಜನರ ಬದುಕಿಗೆ ಎಷ್ಟೊಂದು ವಿನಾಶಕಾರಿಯಾಗಿವೆ ಎಂಬುದು ಈ ನೀತಿಗಳ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ ಎಂದರು.
ದೇಶದ ಕೃಷಿ ವಲಯವನ್ನು ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿದೇಶಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಸುಂಕ ರಹಿತವಾಗಿ ತೆರೆಯಲಾಗುತ್ತಿದೆ. ಸಂಸತ್ತಿನಲ್ಲಾಗಲಿ ಹಾಗೂ ರೈತರ, ಕಾರ್ಮಿಕರ ಜೊತೆಯಲ್ಲಾಗಲಿ ಯಾವುದೇ ರೀತಿ ಚರ್ಚೆ ನಡೆಸದೇ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮಕ್ಕೆ ತೊಂದರೆ ಉಂಟು ಮಾಡುವ ಅಸಮಾನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದಕ್ಕೆ ಬ್ರಿಟನ್ ಜೊತೆ ಭಾರತ ಸಹಿ ಮಾಡಿದೆ ಎಂದರು .ಪ್ರತಿಭಟನೆಯಲ್ಲಿ. ಜಿಲ್ಲಾಧ್ಯಕ್ಷ. ಶಿವಪುರ ಮಹದೇವಪ್ಪ. ಜಿಲ್ಲಾ ಕಾರ್ಯದರ್ಶಿ ಭಾಸ್ಕರ, ರಾಜ್ಯ ಕಾಯಂ ಸದಸ್ಯರಾದ ಮಹೇಶ್ ಕುಮಾರ್, ಹೆಬ್ಬಸೂರ್ ಬಸವಣ್ಣ, ಜಿಲ್ಲಾ ಕಾರ್ಯಧ್ಯಕ್ಷ ಲೋಕೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇಮಳ್ಳಿ ಪ್ರಸಾದ್, ಜಿಲ್ಲಾ ಖಜಾಂಚಿ ಮಹದೇವಸ್ವಾಮಿ, ತಾಲ್ಲೋಕು ಅಧ್ಯಕ್ಷ ಮಹೇಶ್ ಮರಿಯಾಲ, ಕಾರ್ಯದರ್ಶಿ ಮೂಡ್ನಕೂಡು ಮಹೇಶ್, ಗುಂಡ್ಲುಪೇಟೆ ಅಧ್ಯಕ್ಷ ದಿಲೀಪ್, ಯುವ ಘಟಕ ಅಧ್ಯಕ್ಷ ಭರತ್, ಜಯಣ್ಣ,ಮಲ್ಲಣ್ಣ, ಬಾಬು ಇದ್ದರು.13ಸಿಎಚ್‌ಎನ್6ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿ ಕರೆಯ ಮೇರೆಗೆ ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿಯಲ್ಲಿ ಚಾಮರಾಜನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.