ಸಾರಾಂಶ
ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ಸರಿಯಾಗಿ ಅನುದಾನ ಬಾರದೇ ಇರುವ ಕಾರಣ ಪಾಲಿಕೆ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕಳೆದ ಮೂರು ತಿಂಗಳಿಂದ ಪಾಲಿಕೆ ನೌಕರರಿಗೂ ವೇತನ ನೀಡಿಲ್ಲ. ಹೀಗೆ ಪರಿಸ್ಥಿತಿ ಮುಂದುವರಿದರೆ ಪಾಲಿಕೆಗೆ ಬೀಗ ಹಾಕುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ ಎಂದು ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಪಾಲಿಕೆಗೆ ಬರಬೇಕಾದ ಅನುದಾನವನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದರು.ಪ್ರತಿ ತಿಂಗಳು ಪಾಲಿಕೆ ನೌಕರರ ವೇತನಕ್ಕೆ ₹7 ಕೋಟಿ ಬೇಕಾಗುತ್ತದೆ. ಆದರೆ, ಸರ್ಕಾರ 3 ತಿಂಗಳಿಂದ ನೀಡಿಲ್ಲ. ಇದೀಗ 3 ತಿಂಗಳಿನ ₹21 ಕೋಟಿ ಕೊಡುವುದು ಬಾಕಿಯಿದೆ. ಕಾಯಂ ಪೌರ ಕಾರ್ಮಿಕರಿಂದ ಹಿಡಿದು ಆಯುಕ್ತರಿಗೂ ಸರ್ಕಾರವೇ ವೇತನ ನೀಡುತ್ತಿತ್ತು. ಆದರೆ, 3 ತಿಂಗಳಿನಿಂದ ವೇತನಾನುದಾನ ಬಿಡುಗಡೆ ಆಗಿಲ್ಲ. ಇದನ್ನು ಪ್ರಶ್ನಿಸಿ ಪಾಲಿಕೆಯಿಂದ ಪತ್ರ ಬರೆಯಲಾಗಿದೆ. ಪಾಲಿಕೆಯ ಸಾಮಾನ್ಯ ನಿಧಿಯಿಂದ ವೇತನ ನೀಡುವಂತೆ ಸರ್ಕಾರ ಉತ್ತರ ನೀಡಿದೆ ಎಂದರು.
15ನೇ ಹಣಕಾಸು, ಎಸ್‌ಎಫ್‌ಸಿ ಮುಕ್ತನಿಧಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಪಿಂಚಣಿ ಬಾಕಿ, ಅಮೃತ ಯೋಜನೆ ಸೇರಿ ₹290 ಕೋಟಿಗೂ ಅಧಿಕ ಅನುದಾನ ಸರ್ಕಾರದಿಂದ ಬರಬೇಕಿದೆ. ಇದರೊಟ್ಟಿಗೆ 6ನೇ ವೇತನ ಮತ್ತು 7ನೇ ವೇತನ ಆಯೋಗದ ವ್ಯತ್ಯಾಸ ಮೊತ್ತವೂ ಪಾಲಿಕೆಗೆ ಬರಬೇಕಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಲ್ಕಾರು ಬಾರಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಎಂಟ್ಹತ್ತು ಬಾರಿ ಮನವಿ ಸಲ್ಲಿಸಲಾಗಿದೆ. ಜತೆಗೆ ಮುಖ್ಯಕಾರ್ಯದರ್ಶಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಆಯುಕ್ತರೇ ಸಚಿವ ಲಾಡ್ ಅವರಿಗೆ ಕರೆ ಮಾಡಿ ಪಾಲಿಕೆಯ ಹಣಕಾಸಿನ ಸ್ಥಿತಿ ವಿವರಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಪಾಲಿಕೆಯಲ್ಲಿ ಚುನಾಯಿತರ ಅಧಿಕಾರ ಇಲ್ಲದ 2.5 ವರ್ಷ ಅವಧಿಯಲ್ಲಿ ಶಾಸಕರು ಬೇಕಾಬಿಟ್ಟಿಯಾಗಿ ಪಾಲಿಕೆಯ ಸಾಮಾನ್ಯ ನಿಧಿಯನ್ನು ಬಳಸಿಕೊಂಡಿದ್ದಾರೆ. ಚುನಾಯಿತರ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕವೂ ಈ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ, ಪಾಲಿಕೆಯ ಸಾಮಾನ್ಯ ನಿಧಿ ಕರಗಿದೆ ಎಂದು ಇದೇ ವೇಳೆ ಟೀಕಿಸಿದರು.ಸಮರಕ್ಕೆ ಸಿದ್ಧ
ಪಾಲಿಕೆಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಮಾ. 31ರೊಳಗೆ ಕೊಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಾರೋ ಗೊತ್ತಿಲ್ಲ. ತಕ್ಷಣವೇ ಪಾಲಿಕೆಗೆ ಸರ್ಕಾರದಿಂದ ಬರಬೇಕಾದ ಅನುದಾನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದರು.ಪಾಲಿಕೆ ಸದಸ್ಯ ಶಿವು ಹಿರೇಮಠ ಇದ್ದರು.
ರಾಜ್ಯಪಾಲರ ಭೇಟಿ
ಮೇಯರ್ ಹಾಗೂ ಸದಸ್ಯರು 2 ವರ್ಷದಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳನ್ನು ಸದೃಢ ಮಾಡುವುದು ಸರ್ಕಾರದ ಮೊದಲ ಆದ್ಯತೆ. ಆದರೆ, ಸರ್ಕಾರ ಇದಕ್ಕೆ ವಿರುದ್ಧ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಸರ್ಕಾರದ ನಡೆ ಖಂಡಿಸಿ ಪಾಲಿಕೆ ಸದಸ್ಯರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ಪಾಲಿಕೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ತಿಳಿಸಿದರು.ಕಾಂಗ್ರೆಸ್ ಸದಸ್ಯರನ್ನು ಕರೆಯುತ್ತೇವೆ. ಬಂದರೆ ಅವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಒಂದು ವೇಳೆ ಬಾರದಿದ್ದರೆ ಬಿಜೆಪಿ ಸದಸ್ಯರಷ್ಟೇ ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇವೆ. ಬಳಿಕ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಇದರೊಂದಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸುತ್ತೇವೆ ಎಂದರು.