ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ ಸಮುದಾಯದ ಏಳಿಗೆಗಾಗಿ ನಿಗಮ ಸ್ಥಾಪನೆ: ಪಲ್ಲವಿ ಜಿ.

| Published : Dec 10 2024, 12:33 AM IST / Updated: Dec 10 2024, 01:42 PM IST

ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ ಸಮುದಾಯದ ಏಳಿಗೆಗಾಗಿ ನಿಗಮ ಸ್ಥಾಪನೆ: ಪಲ್ಲವಿ ಜಿ.
Share this Article
  • FB
  • TW
  • Linkdin
  • Email

ಸಾರಾಂಶ

ಅಲೆಮಾರಿ ಸಮುದಾಯದವರಿಗೆ ನೆಲೆ ಸೇರಿದಂತೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ಪಜಾ, ಪಪಂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಗದಗ: ನಿರ್ಲಕ್ಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದವರ ಏಳಿಗೆಗಾಗಿ ನಿಗಮ ಸ್ಥಾಪನೆಯಾಗಿದ್ದು, ಪಜಾ ಮತ್ತು ಪಪಂ ಅಲೆಮಾರಿ ಸಮದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕರ್ನಾಟಕ ಪಜಾ, ಪಪಂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಲೆಮಾರಿ ಸಮುದಾಯದವರಿಗೆ ನೆಲೆ ಸೇರಿದಂತೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಸರ್ಕಾರದ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಮೌಢ್ಯ ಹೋಗಲಾಡಿಸಿ ಆ ಸಮುದಾಯವರಿಗೆ ಶಿಕ್ಷಣ ಒದಗಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪ್ರತಿ ವರ್ಷ ಆಗಸ್ಟ್ 31ರಂದು ವಿಮುಕ್ತ ಬುಡಕಟ್ಟುಗಳ ದಿನಾಚರಣೆ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಗ್ರಾಮದ ಗಂಟಿಚೋರ್ ಜನಾಂಗದವರಿಗೆ ಸ್ಮಶಾನ ಭೂಮಿ ಅಭಿವೃದ್ಧಿ, ನಿವೇಶನ ಸಮಸ್ಯೆ, ಜಾತಿ ಪ್ರಮಾಣ ಪತ್ರ, ನೂಲಿ ಚಂದಯ್ಯನವರ ಭವನ ಮಂಜೂರಾತಿ, ವಯಸ್ಕರ ಶಿಕ್ಷಣ ಕುರಿತು ಸಮಸ್ಯೆಗಳು ಕಂಡು ಬಂದಿದ್ದು ಈ ಕುರಿತು ಕ್ರಮ ವಹಿಸಲಾಗುವುದು ಎಂದರು.

ಲಕ್ಷ್ಮೇಶ್ವರ ಪಟ್ಟಣದ ಇಂದಿರಾ ನಗರದಲ್ಲಿ ಪ. ಜಾತಿಯ ಬುಡ್ಲಜಂಗಮ್ ಸಮುದಾಯದ ಕುಟುಂಬಗಳಿಗೆ ನಿವೇಶನ ಲಭ್ಯವಿದ್ದು ಮನೆ ಕಟ್ಟಿಸುವುದು, ಚೆನ್ನದಾಸರ ಸಮುದಾಯದ ಕುಟುಂಬಗಳಿಗೆ ನಿವೇಶನ, ಸುಡುಗಾಡ ಸಿದ್ಧರ ಸಮುದಾಯದವರಿಗೆ ನಿವೇಶನ ಒದಗಿಸುವ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ.

ನರಗುಂದ ಪಟ್ಟಣದ ಹರಣಶಿಕಾರಿ ಸಮುದಾಯದವರಿಗೆ ನಿವೇಶನಗಳ ಸಮಸ್ಯೆಯಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು. ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದ್ದು, ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಈ ಜನರಿಗೆ ಶುಚಿತ್ವದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ನರೇಗಲ್ ಪಟ್ಟಣದ ಸಿಂಧೋಳು ಸಮುದಾಯದವರ 55 ಕುಟುಂಬಗಳು ಇದ್ದು ಅದರಲ್ಲಿ 11 ಮನೆಗಳು ನಿರ್ಮಾಣವಾಗಿದ್ದು, ಉಳಿದವರಿಗೆ ಬೇರೆ ಕಡೆ ನಿವೇಶನದ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಹಾಗೂ ರಸ್ತೆ ಸಂಪರ್ಕ ಸೇರಿದಂತೆ ಇಲ್ಲಿನ ಜನರಿಗೆ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್‌ ಸಮಸ್ಯೆಗಳಿದ್ದು, ಆದಷ್ಟು ಶೀಘ್ರ ಪರಿಹರಿಸಬೇಕಾಗಿದೆ. ಮೇವುಂಡಿ ಗ್ರಾಮದ ಬುಡ್ಲ ಜಂಗಮ ಸಮುದಾಯದ ಒಟ್ಟು 13 ಕುಟುಂಬಗಳಿದ್ದು 4 ಕುಟುಂಬಗಳಿಗೆ ಮನೆಗಳಿದ್ದು 9 ಕುಟುಂಬಗಳಿಗಿಲ್ಲ. ಅವರ ವಸತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಜಾತಿ ಪ್ರಮಾಣ ಪತ್ರದ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.

ಮುಂಡರಗಿ ಪಟ್ಟಣದ ಕುಂಚಿ ಕೊರವ ಸಮುದಾಯದವರ 35 ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು 28 ಜನರ ಅರ್ಜಿಗಳು ಆಯ್ಕೆಯಾಗಿದ್ದು, ಶೀಘ್ರದಲ್ಲಿ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುವುದು. ಮನೆ ನಿರ್ಮಾಣ ,ಕುಡಿಯುವ ನೀರು ಮತ್ತು ಬೀದಿ ದೀಪದ ಸಮಸ್ಯೆ, ವಯಸ್ಕರ ಶಿಕ್ಷಣ ಕುರಿತಂತೆ ಕ್ರಮ ವಹಿಸಲಾಗುವುದು. ಗದಗ ನಗರದ ಸುಡುಗಾಡು ಸಿದ್ಧರ ಸಮುದಾಯದವರಿಗೆ ಅವರ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗದಗ-ಬೆಟಗೇರಿಯ ಹರಣಶಿಕಾರಿ, ಗಂಟಿ ಚೋರ್, ಕೊರಚ, ಕೊರಮ, ಚೆನ್ನದಾಸರ ಸಮುದಾಯಗಳಿಗೆ ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್, ನೇರ ಸಾಲ ಮತ್ತು ಉದ್ಯಮಶೀಲತಾ ಯೋಜನೆಗಳಡಿ ಸೌಲಭ್ಯ ದೊರಕಿಸಬೇಕು. ಛಪ್ಪರಬಂದ ಸಮುದಾಯದವರಿಗೆ ಪ.ಜಾ, ಪ.ಪಂ ಅಲೆಮಾರಿ ಸ್ಥಾನ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ನಿಗಮದ ವಿಶೇಷ ಅಧಿಕಾರಿ ಆನಂದ ಏಕಲವ್ಯ, ನಗರಸಭೆ ನಾಮನಿರ್ದೇಶಿತ ಸದಸ್ಯ ದುರ್ಗೆಶ ವಿಭೂತಿ, ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯ ಹುಲ್ಲೇಶ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಇದ್ದರು.