ಸಾರಾಂಶ
₹2 ಸಾವಿರ ಕೋಟಿ ಬಾಕಿ ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ವಿನಾಯ್ತಿ ಆಮಿಷ? ಬಾಕಿ ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ಸರ್ಕಸ್. 3 ಬಗೆಯ ವಿನಾಯಿತಿ ನೀಡಲು ಸರ್ಕಾರಕ್ಕೆ ಪ್ರಸ್ತಾವ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಲು ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಆಸ್ತಿಗಳಿಗೆ ಒಂದೇ ಬಾರಿಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಅಥವಾ ಬಡ್ಡಿ ಮನ್ನಾ ಮಾಡುವ ಕುರಿತು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ಬಿಬಿಎಂಪಿ ಆದಾಯದ ಪ್ರಮುಖ ಮೂಲವಾದ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಲು ತೆರಿಗೆ ಅಧಿಕಾರಿಗಳಿಗೆ ವಾರದ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಅದರ ಜತೆಗೆ ಬಾಕಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿದ್ದರೂ ವಾಣಿಜ್ಯ ಆಸ್ತಿಗಳಿಂದ ಬರಬೇಕಿರುವ ₹2 ಸಾವಿರ ಕೋಟಿಗೂ ಹೆಚ್ಚಿನ ಬಾಕಿ ವಸೂಲಿ ಆಗುತ್ತಿಲ್ಲ. ಈ ಮೊತ್ತ ವಸೂಲಿಗೆ ಒಂದೇ ಬಾರಿಗೆ ಬಾಕಿ ತೆರಿಗೆ ಪಾವತಿ ಮಾಡುವವರಿಗೆ ಮೂರು ಬಗೆಯ ವಿನಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಒಂದೇ ಕಂತಿನಲ್ಲಿ ಬಾಕಿ ತೆರಿಗೆ ಪಾವತಿಸುವವರಿಗೆ ಬಡ್ಡಿ ಅಥವಾ ದಂಡ ಮನ್ನಾ ಮಾಡುವುದು. ಬಿಬಿಎಂಪಿ ಕಾಯ್ದೆ 2020ರ ಪ್ರಕಾರ ಆಸ್ತಿ ತೆರಿಗೆ ಬಾಕಿ ಇರುವ ಕಟ್ಟಡ ಮಾಲಿಕರಿಗೆ ದುಪ್ಪಟ್ಟು ದಂಡ ಅಥವಾ ಬಡ್ಡಿ ವಿಧಿಸಲಾಗುತ್ತದೆ. ಬಾಕಿ ತೆರಿಗೆ ಪಾವತಿಸುವವರಿಗೆ ದುಪ್ಪಟ್ಟು ಬದಲು ಒಂದು ಪಟ್ಟು ಮಾತ್ರ ಬಡ್ಡಿ ಅಥವಾ ದಂಡ ವಿಧಿಸುವುದು. ಅಲ್ಲದೆ, ಬಾಕಿ ತೆರಿಗೆಗೆ ವಿಧಿಸಲಾಗುವ ಬಡ್ಡಿ ಮತ್ತು ದಂಡದಲ್ಲಿ ಒಂದನ್ನು ಮಾತ್ರ ವಸೂಲಿ ಮಾಡುವುದು. ಹೀಗೆ ಮೂರು ಅವಕಾಶವನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇದರಲ್ಲಿ ಸರ್ಕಾರ ಯಾವುದಕ್ಕೆ ಅನುಮತಿ ನೀಡಿದರೂ, ಅದರ ಪ್ರಕಾರ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.