ಸಾರಾಂಶ
ಕಳೆದ 10 ವರ್ಷಗಳಿಂದ ಹವಾಮಾನ ಬದಲಾವಣೆ, ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ್ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.
ಹುಬ್ಬಳ್ಳಿ:
ಹವಾಮಾನ ಬದಲಾವಣೆಯಿಂದಾಗಿ ತಾಪಮಾನ ಏರಿಕೆಯಾಗಿದ್ದು, ತಡೆಯಲು ಜಾರಿಗೆ ತಂದ ನಿಯಮಗಳನ್ನು ಪಾಲಿಕೆ ಅನುಸರಿಸುತ್ತಿಲ್ಲ ಎಂದು ಆರೋಪಿಸಿ ಅಕ್ಕ ಫೌಂಡೇಶನ್ ಟ್ರಸ್ಟ್ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.ಗುರುವಾರ ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹು-ಧಾ ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಿಂದ ಹವಾಮಾನ ಬದಲಾವಣೆ, ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ್ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ರಾಜ್ಯ ಸರ್ಕಾರವೂ ಜಾರಿಗೊಳಿಸುತ್ತಿಲ್ಲ. ಮಹಾನಗರ ಪಾಲಿಕೆಯೂ ಜಾರಿಗೊಳಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಹೋರಾಟ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.ಚೀಪ್ಸ್, ಬಿಸ್ಕತ್ ತಯಾರಕರು ತಮ್ಮಿಂದ ಬಂದ ಪ್ಲಾಸ್ಟಿಕ್ ರ‍್ಯಾಪರ್, ವೆಸ್ಟ್ ತೆಗೆದುಕೊಂಡು ರಿಸೈಕ್ಲಿಂಗ್ ಮಾಡಿಸದೇ ಇರುವುದರಿಂದ ಎಲ್ಲೆಡೆ ಪ್ಲಾಸ್ಟಿಕ್ ಹರಡಿ ವೃಕ್ಷಮಾತೆ, ಗೋಮಾತೆ ಮತ್ತು ಪ್ರಕೃತಿಮಾತೆ ಸಾವಿನಂಚಿನಲ್ಲಿವೆ. ಇದರಿಂದಾಗಿ ಸಂಪನ್ಮೂಲಗಳಾದ ಸ್ವಚ್ಛವಾದ ಗಾಳಿ, ನೀರು, ಕಲುಷಿತವಾಗುತ್ತಿದೆ. ಹವಾಮಾನ ವೈಪರಿತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಹೆಚ್ಚುತ್ತಿದೆ. ಇದೇ ರೀತಿ ಮುಂದುವರಿದರೇ ಪ್ರಾಣಿ ಮತ್ತು ಪಕ್ಷಿ ಸಂಕುಲ ಅವನತಿ ಹೊಂದಲಿದೆ. ಆದ್ದರಿಂದ ಸರ್ಕಾರ ಮುಂದೆಯಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ವೀರೇಶ ಅರಕೇರಿ, ಚನ್ನಬಸವರಾಜ ಅರಕೇರಿ, ಜಯರಾಜ ಅರಕೇರಿ, ಮೃತ್ಯುಂಜಯ ಸಾಲಿ, ಸುರೇಶ ಕಡಕೋಳ ಇದ್ದರು.