ಇಂದಿನಿಂದ ಪಾಲಿಕೆ ಕಸ ವಿಲೇವಾರಿ ನೌಕರರ ಪ್ರತಿಭಟನೆ

| Published : Feb 13 2024, 12:49 AM IST

ಸಾರಾಂಶ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಪೌರ ಚಾಲಕರು, ನೀರಗಂಟಿಗಳು, ಲೋಡರ್ಸ್‌, ಕ್ಲೀನರ್ಸ್‌, ಹೆಲ್ಪರ್ಸ್‌, ಯುಜಿಡಿ ಕಾರ್ಮಿಕರು ಸೇರಿ ಎಲ್ಲಾ ಹೊರ ಗುತ್ತಿಗೆ ನೌಕರರ ನೇರ ಪಾವತಿಗೊಳಪಡಿಸಲು ಆಗ್ರಹಿಸಿ ಮೂರು ದಿನ ಹೋರಾಟ ನಡೆಯಲಿದೆ. ಈವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆಯೇ ಸಿಕ್ಕಿಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆಯ ಎಲ್ಲಾ ನೌಕರರ ನೇರ ಪಾವತಿಗೆ ತರಲು ಬಜೆಟ್‌ ನಲ್ಲಿ ಘೋಷಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಫೆ.13 ಮತ್ತು 14ರಂದು ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ, ಫೆ.15ರಂದು ಹೊರ ಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಹೊರ ಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಆರ್‌.ದುಗ್ಗೇಶ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಪೌರ ಚಾಲಕರು, ನೀರಗಂಟಿಗಳು, ಲೋಡರ್ಸ್‌, ಕ್ಲೀನರ್ಸ್‌, ಹೆಲ್ಪರ್ಸ್‌, ಯುಜಿಡಿ ಕಾರ್ಮಿಕರು ಸೇರಿ ಎಲ್ಲಾ ಹೊರ ಗುತ್ತಿಗೆ ನೌಕರರ ನೇರ ಪಾವತಿಗೊಳಪಡಿಸಲು ಆಗ್ರಹಿಸಿ ಮೂರು ದಿನ ಹೋರಾಟ ನಡೆಯಲಿದೆ. ಈವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆಯೇ ಸಿಕ್ಕಿಲ್ಲ. ಹೊರ ಗುತ್ತಿಗೆ ನೌಕರರ ನೇರ ಪಾವತಿಯಡಿ ತಂದರೆ ಸರ್ಕಾರಕ್ಕೆ ಜಿಎಸ್‌ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ಸಿಗುತ್ತದೆ. ಅಲ್ಲದೇ, ಏಜೆನ್ಸಿಗಳ ಕಿರುಕುಳವೂ ತಪ್ಪಲಿದೆ ಎಂದು ಹೇಳಿದರು.

ಹಿಂದಿನ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿಯೇ ಕಾರ್ಮಿಕರನ್ನು ನೇರ ಪಾವತಿಗೆ ತರಲು ತೀರ್ಮಾನವಾಗಿದೆ. ಆದರೆ, ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ಅದು ಜಾರಿಯಾಗುತ್ತಿಲ್ಲ. ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ನೌಕರರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಸಂಘದ ಬಿ.ಸಂತೋಷ್‌, ಎಚ್.ಎಂ.ಕೊಟ್ರೇಶ, ಜಿ.ಎಚ್.ಚಂದ್ರಪ್ಪ, ಎಂ.ರಮೇಶ, ಮೈಲಾರಪ್ಪ, ಎನ್.ದ್ಯಾಮಣ್ಣ, ನವೀನಕುಮಾರ, ಕೆಟಿಜೆ ನಗರ ರವಿ ಇತರರಿದ್ದರು.

ಐದು ತಿಂಗಳಿಂದ ಕಸದ ಗಾಡಿ ಚಾಲಕರಿಗೆ ವೇತನವಿಲ್ಲ!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ದಾವಣಗೆರೆ ಪಾಲಿಕೆ ಕಸ ವಿಲೇವಾರಿ ವಾಹನಗಳ ಚಾಲಕರು ಕಳೆದ 5 ತಿಂಗಳಿನಿಂದಲೂ ಸಂಬಳವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ವೇತನ ನೀಡದಿದ್ದರೆ, ತಮ್ಮ ಬೇಡಿಕೆಗಳ ಈಡೇರಿಸದಿದ್ದರೆ ತಾವು ನಿರ್ವಹಿಸುವ ವಾಹನಗಳ ಸಮೇತ ಬೆಂಗಳೂರು ಚಲೋ ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ, ಟೆಂಡರ್ ಪಡೆದ ಕಂಪನಿ ಹಾಗೂ ಪಾಲಿಕೆ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರ ಹಾಕಿದ್ದಾರೆ. ಹುಬ್ಬಳ್ಳಿ ಮೂಲಕ ಆದರ್ಶ ಎಂಟರ್ ಪ್ರೈಸಸ್‌ ಎಂಬುವರಿಗೆ ಗುತ್ತಿಗೆ ಆಗಿತ್ತು. ಟೆಂಡರ್ ಬದಲಾವಣೆ ಆದಾಗಿನಿಂದಲೂ ವೇತನ ಸರಿಯಾಗಿ ನೀಡುತ್ತಿಲ್ಲ. ಪಿಎಫ್-ಇಎಸ್ಐ ಸಹ ಇಲ್ಲದೇ, ಜೀವನ ಭದ್ರತೆ ಇಲ್ಲದೇ ದುಡಿಯುತ್ತಿರುವ ತಮ್ಮನ್ನು ಸಂಪೂರ್ಣ ಕಡೆಗಣಿಸಿ, ಅನ್ಯಾಯ ಮಾಡಲಾಗುತ್ತಿದೆ ಎಂಬುದು ಕಸ ವಿಲೇವಾರಿ ವಾಹನ ಚಾಲಕರ ಗಂಭೀರ ಆರೋಪವಾಗಿದೆ.