130 ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಿಸಲು ಪಾಲಿಕೆ ಸಿದ್ಧತೆ

| Published : Mar 30 2024, 12:51 AM IST / Updated: Mar 30 2024, 01:16 PM IST

ಸಾರಾಂಶ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದ ಜೌಗು ಭೂಮಿಗಳ ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆ ಮಾಡುವಂತೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ 130 ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆಗೆ ಬಿಬಿಎಂಪಿ ತಯಾರಿ ನಡೆಸಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಅಧಿಕ ಕೆರೆಗಳಿದ್ದು, ಈ ಪೈಕಿ 2.25 ಹೆಕ್ಟೇರ್‌ಗಿಂತ ಹೆಚ್ಚಿನ ವಿಸ್ತೀರ್ಣವಿರುವ 130 ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜೌಗು ಭೂಮಿಗಳ (ಸಂರಕ್ಷಣೆ ಮತ್ತು ನಿರ್ವಹಣೆ) ನಿಯಮಗಳನ್ನು(2017) ಪ್ರಕಟಿಸಿ ದೇಶದ ಜೌಗು ಭೂಮಿಗಳ ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆ ಮಾಡುವಂತೆ ಸೂಚಿಸಿದೆ. 

ಕೇಂದ್ರ ಸೂಚಿಸಿದ ಮಾರ್ಗಸೂಚಿ, ನಿಯಮಗಳನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆಯು ಈಗಾಗಲೇ ಕರ್ನಾಟಕ ಜೌಗು ಭೂಮಿ ಪ್ರಾಧಿಕಾರವನ್ನು ರಚಿಸಿದ್ದು, 2.25 ಹೆಕ್ಟೇರ್‌ಗಿಂತ ಹೆಚ್ಚಿನ ವಿಸ್ತೀರ್ಣ ಇರುವ ರಾಜ್ಯದ ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆ ಅಗತ್ಯ ಮಾಹಿತಿ ಸಲ್ಲಿಕೆಗೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆರೆಗಳ ನಿರ್ವಹಣೆ ಮಾಡುತ್ತಿರುವ ಬಿಬಿಎಂಪಿಯು ಜೌಗು ಪ್ರದೇಶವೆಂದು ಘೋಷಣೆ ಮಾಡಬಹುದಾದ ಕೆರೆಗಳನ್ನು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಈ ಪ್ರಕಾರ ಸುಮಾರು 130ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದ ಸಭೆ: ಬಿಬಿಎಂಪಿಯ ಪರಿಸರ,ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗ ವಿಶೇಷ ಆಯುಕ್ತರು, ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕರ್ನಾಟಕ ಜೌಗು ಭೂಮಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಮೊದಲ ಹಂತದ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಬಿಬಿಎಂಪಿ 202 ಕೆರೆಗಳ ಪೈಕಿ ಎಷ್ಟು ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆ ಮಾಡಬಹುದು. ಜೌಗು ಪ್ರದೇಶವೆಂದು ಘೋಷಣೆ ಮಾಡುವುದಕ್ಕೆ ಸಲ್ಲಿಕೆ ಮಾಡಬೇಕಾದ ದಾಖಲೆಗಳಾವು, ಯಾವ ಯಾವ ಇಲಾಖೆಯ ಸಹಕಾರ ಪಡೆಯಬೇಕಾಗಲಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ.

10 ಕೆರೆಗಳ ದಾಖಲಾತಿ ಸಿದ್ಧತೆ: ಮೊದಲ ಹಂತದಲ್ಲಿ 10 ಕೆರೆಗಳ ದಾಖಲಾತಿ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈ ದಾಖಲಾತಿಯನ್ನು ಈ ತಿಂಗಳ ಅಂತ್ಯದೊಳಗೆ ಕರ್ನಾಟಕ ಜೌಗು ಭೂಮಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಕೆರೆಗಳಲ್ಲಿ ಎಷ್ಟು ಪ್ರದೇಶ ನೀರಿನಿಂದ ಕೂಡಿರಲಿದೆ. ಉಳಿದ ಎಷ್ಟು ಪ್ರದೇಶದಲ್ಲಿ ಅಭಿವೃದ್ಧಿ ನಡೆಸಲಾಗಿದೆ. ಯಾವ ಯಾವ ರೀತಿ ಅಭಿವೃದ್ಧಿ ನಡೆಸಲಾಗಿದೆ. ಕೆರೆಯ ಜೀವ ವೈವಿಧ್ಯತೆ ಏನು ಸೇರಿದಂತೆ ಮೊದಲಾದ ಅಂಶಗಳನ್ನು ಒಳಗೊಂಡಿರಲಿದೆ.

ಘೋಷಣೆ ಲಾಭಗಳೇನು?: ಕೆರೆಗಳಲ್ಲಿನ ಜೀವ ವೈವಿಧ್ಯತೆ ಸಂರಕ್ಷಣೆಗೆ ಮಾರಕವಾಗುವ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವುದಕ್ಕೆ ಕೇಂದ್ರ ಸರ್ಕಾರ ಮತ್ತು ಜೌಗು ಭೂಮಿ ಪ್ರಾಧಿಕಾರ ಕಡಿವಾಣ ಹಾಕಬಹುದು. ಕೆರೆಗಳ ಸಂರಕ್ಷಣೆಗೆ ಒತ್ತು ನೀಡುವುದು. ಕೆರೆಗಳ ಮೇಲೆ ನಿಗಾ ವಹಿಸುವುದು ಸೇರಿದಂತೆ ಮೊದಲಾದ ಅಂಶಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.