ಜಾಹಿರಾತಿನಿಂದ ಪಾಲಿಕೆಗೆ ಬರಬೇಕಾದ ಆದಾಯ ಖೋತಾ!

| Published : Mar 29 2025, 12:31 AM IST

ಸಾರಾಂಶ

ಜಾಹೀರಾತಿನಿಂದ ಮಹಾನಗರ ಪಾಲಿಕೆಗೆ ಬರಬೇಕಾದ ಆದಾಯದಲ್ಲಿ ಖೋತಾ ಆಗುತ್ತಿರುವ ಬಗ್ಗೆ ಶುಕ್ರವಾರ ಇಲ್ಲಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಧಾರವಾಡ: ಜಾಹೀರಾತಿನಿಂದ ಮಹಾನಗರ ಪಾಲಿಕೆಗೆ ಬರಬೇಕಾದ ಆದಾಯದಲ್ಲಿ ಖೋತಾ ಆಗುತ್ತಿರುವ ಬಗ್ಗೆ ಶುಕ್ರವಾರ ಇಲ್ಲಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಮಾಜಿ ಮೇಯರ್ ಈರೇಶ ಅಂಚಟಗೇರಿ ವಿಷಯ ಪ್ರಸ್ತಾಪಿಸಿ, ಜಾಹಿರಾತಿನ ವಿಷಯದಲ್ಲಿ ಪಾಲಿಕೆಯ ನಿರ್ಲಕ್ಷ್ಯ ಖಂಡಿಸಿದರು. ಅಧೀಕೃತ ಜಾಹೀರಾತುಗಳಿಂದ ಆದಾಯ ಸಂಗ್ರಹಿಸಬೇಕು. ಅನಧಿಕೃತ ‌ಜಾಹೀರಾತಿಗಳನ್ನು ತೆರವುಗೊಳಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಮಾಜಿ ಮೇಯರ ವೀರಣ್ಣ ಸವಡಿ ಕೂಡ ಧ್ವನಿಗೂಡಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ‌ ಕಮತಿ ಮಾತನಾಡಿ, ‌ಪಾಲಿಕೆಯ ವಾಣಿಜ್ಯ ‌ಮಳಿಗೆಗಳನ್ನು ಪಡೆದವರು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಗಮನಹರಿಸಿದರೆ ಪಾಲಿಕೆಯು ಇನ್ನೂ ಹೆಚ್ಚು ಆದಾಯ ನಿರೀಕ್ಷಿಸಬಹುದು. ಜೊತೆಗೆ ಅವಳಿ ನಗರದಲ್ಲಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಹಿರಿಯ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಪಾಲಿಕೆ ಉದ್ಯಾನವನಗಳ ಸೌಂದರ್ಯೀಕರಣ, ನಿರ್ವಹಣೆಗೆ ಹಣ ಇಲ್ಲದಿರುವುದರಿಂದ ಕಸದ ತೊಟ್ಟಿಗಳಾಗಿವೆ. ಆದ್ದರಿಂದ ಉದ್ಯಾನವನಗಳಿಗೆ ಪ್ರತ್ಯೇಕ ಸೆಸ್ ಸಂಗ್ರಹಿಸಬೇಕು. ಪ್ರತಿದಿನ ಅಸಂಖ್ಯಾತ ಪ್ರಮಾಣದ‌ಲ್ಲಿ ವಾಹನಗಳು ರಸ್ತೆಗಿಳಿಯುತ್ತಿವೆ. ಬೇರೆ ಪಾಲಿಕೆಗಳಲ್ಲಿ ಇರುವಂತೆ ಪಾರ್ಕಿಂಗ್ ತೆರಿಗೆ ವಸೂಲು ಮಾಡುವ ವ್ಯವಸ್ಥೆ ಮಾಡಬೇಕು. ಉದ್ಯಾನವನಗಳ ನಿರ್ವಹಣೆಯ ಹಣವನ್ನು ಅನ್ಯ ಕೆಲಸಗಳಿಗೆ ವ್ಯಯಿಸಬಾರದು ಎಂದು ಸಲಹೆ ನೀಡಿದರು.

ಪಾಲಿಕೆ ಬಜೆಟ್‌ನಲ್ಲಿ ಹಲವಾರು ವಿಷಯಗಳ ಉಲ್ಲೇಖಿಸುವ ಸಂದರ್ಭದಲ್ಲಿ ತಪ್ಪು ಅಂಕಿ-ಅಂಶಗಳಿವೆ. ಇದು ಸದಸ್ಯರಿಗೆ ಮಾಹಿತಿ‌ ನೀಡುವಾಗ ಲೋಪ ಎಸಗಿದಂತಾಗಿದೆ ಎಂದು ಈರೇಶ ಅಂಚಟಗೇರಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಜಶೇಖರ‌ ಕಮತಿ ಸಹ ಮಧ್ಯಪ್ರವೇಶಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಗದ್ದಲದ ವಾತಾವರಣ

ಆಗ ಮೇಯರ ರಾಮಣ್ಣ ಬಡಿಗೇರ ಮಾತನಾಡಿ, ಬಜೆಟ್‌ನಲ್ಲಿ ಸೇರಿಸಬೇಕಿರುವ ಅಂಶಗಳನ್ನು ಸೇರಿಸಿ ಪರಿಷ್ಕರಣೆ ಮಾಡುವುದಾಗಿ ಹೇಳಿದ ನಂತರ ಚರ್ಚೆ ಮುಕ್ತಾಯವಾಯಿತು. ಸಾಮಾನ್ಯ ಸಭೆಯಲ್ಲಿ ಮಂಡಿಸುವ ಹೆಚ್ಚುವರಿ ವಿಷಯಗಳ ಪಟ್ಟಿಯನ್ನು ಮುಂಚಿತವಾಗಿ ಸದಸ್ಯರಿಗೆ ವಿತರಿಸಬೇಕು ಎಂದು ಕಾಂಗ್ರೆಸ್ ನ ಸುವರ್ಣ ಕಲ್ಲಕುಂಟ್ಲ ಒತ್ತಾಯಿಸಿದ ಸಂದರ್ಭದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಎಲ್ಲ‌ ಸದಸ್ಯರು ಎದ್ದು ನಿಂತು ಏರು ಧ್ವನಿಯಲ್ಲಿ ಕೂಗಾಡಿದ ಘಟನೆಯೂ ನಡೆಯಿತು. ತುರ್ತು ಅಗತ್ಯ ‌ಎನಿಸಿದ ಪರಿಣಾಮ ಹೆಚ್ಚುವರಿ ವಿಷಯಗಳನ್ನು ಚರ್ಚಿಸಲು ಸಭೆಯಲ್ಲಿ ಇಡಲಾಗಿದೆ ಎಂದು ಮೇಯರ ಬಡಿಗೇರ ವಿವರಿಸಿದ ಬಳಿಕ ಗದ್ದಲ ಶಮನವಾಯಿತು. ಬಜೆಟ್‌ ಮೇಲೆ ಚರ್ಚೆ ನಂತರ ಸದಸ್ಯರ ಸೂಕ್ತ ಸಲಹೆಗಳನ್ನು ಪರಿಶೀಲಿಸಿ ಅಳವಡಿಸಿಕೊಳ್ಳುವುದಾಗಿ ಆಯುಕ್ತ ಡಾ.ರುದ್ರೇಶ ಘಾಳಿ ಸಭೆಗೆ ತಿಳಿಸಿದರು.