ಬೆಳೆ ವಿಮೆ ಪಾವತಿಯಲ್ಲಾದ ಅನ್ಯಾಯ ಸರಿಪಡಿಸಿ

| Published : May 26 2024, 01:34 AM IST

ಸಾರಾಂಶ

ಬೆಳೆ ಬೆಳೆದಂತಹ ರೈತರ ಪಹಣಿಯಲ್ಲಿ ಬೆಳೆ ದೃಢೀಕರಣ ಮಾಡದೆ, ವಿಮೆ ಹಣ ಜಮೆಯಾಗಿಲ್ಲ ಮತ್ತು ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕ ರಾಜ್ಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮತ್ತು ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರನ್ನು ಭೇಟಿ ಮಾಡಿ ಅಹವಾಲು ನೀಡಿ ಜ್ವಲಂತ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮತ್ತು ರೈತ ಸಂಘದ ಪಧಾಧಿಕಾರಿಗಳು ಜಿಲ್ಲೆಯಲ್ಲಿ ಬೆಳೆಗಳ ವಿಮೆ ಮಾಡುವುದರಲ್ಲಿ ಸಂಬಂಧಪಟ್ಟ ಗ್ರಾಮ ಸಹಾಯಕ (ವಿಎ) ಹಾಗೂ ವಿಮಾ ಕಂಪನಿಯವರು ಸರಿಯಾದ ಸ್ಥಳ ಪರಿಶೀಲನೆ ಮಾಡದೆ, ಬೆಳೆ ಪರಿಶೀಲನೆ ಮಾಡದೆ ಬೇಜವಾಬ್ದಾರಿ ತೋರಿರುವುದರಿಂದ ತುಂಬಾ ರೈತರಿಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.

ಬೆಳೆ ಇಲ್ಲದಿದ್ದರೂ ಪರಿಹಾರ!

ಭೂಮಿಯಲ್ಲಿ ಬೆಳೆ ಬೆಳೆಯದಿದ್ದರೂ ಅಂತಹ ರೈತರ ಖಾತೆಗೆ ಹಣ ಜಮೆಯಾಗಿದೆ. ಬೆಳೆ ಬೆಳೆದಂತಹ ರೈತರ ಪಹಣಿಯಲ್ಲಿ ಬೆಳೆ ದೃಢೀಕರಣ ಮಾಡದೆ, ವಿಮೆ ಹಣ ಜಮೆಯಾಗಿಲ್ಲ ಮತ್ತು ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಇಂತಹ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತುಕ್ರಮ ಜರಿಗಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹೂವಿನ ಮಾರುಕಟ್ಟೆ ಇಲ್ಲದೆ ಮೂರು ವರ್ಷಗಳಿಂದ ರೈತರು ಅಲೆದಾಡುವ ಪರಿಸ್ಥಿತಿ ಬಂದಿದೆ ಮತ್ತು ಹೂವಿನ ಮಾರುಕಟ್ಟೆಯಲ್ಲಿ ನೂರು ರುಪಾಯಿಗಳಿಗೆ ಹತ್ತು ರುಪಾಯಿ ಸುಂಕ ವಸೂಲಿ ಮಾಡುತ್ತಾರೆ. ಅದನ್ನು ಮೂರು ರುಪಾಯಿಗಳು ಇಳಿಸಬೇಕು. ಕೂಡಲೆ ರೈತರಿಗೆ ಹೂವಿನ ಮಾರುಕಟ್ಟೆಗೆ ಜಾಗ ಗುರ್ತಿಸಿ, ಮೂಲಭೂತ ಸೌಕರ್ಯಗಳಿಂದ ಕೂಡಿದ ಹೂವಿನ ಮಾರುಕಟ್ಟೆ ಪ್ರಾರಂಭಿಸಬೇಕು.ನಂತರ ಎಚ್ ಎನ್ ವ್ಯಾಲಿ ನೀರು ಸಮರ್ಪಕವಾಗಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು ಎಂದು ಒತ್ತಾಯಿಸಿದರು.

ಬಿತ್ತನೆ ಬೀಜ, ಗೊಬ್ಬರ ದಾಸ್ತಾನು

ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜುಗೊಂಡಿದ್ದು, ಮುಂದಿನ ತಿಂಗಳಲ್ಲಿ ಬಿತ್ತನೆ ಮಾಡಲು ಪ್ರಾರಂಭ ಮಾಡುತ್ತಾರೆ. ಆದ್ದರಿಂದ ಬೀಜ ಮತ್ತು ರಸಗೊಬ್ಬರಗಳನ್ನು ಸ್ಟಾಕ್ ಮಾಡಿಸಬೇಕು. ಬಿತ್ತನೆ ಆದ ನಂತರ ಯೂರಿಯಾ,ಡಿಎಪಿ,ಸೇರಿದಂತೆ ರಸಗೊಬ್ಬರ,ಕೀಟನಾಶಕಗಳು ಸಿಗುವಂತೆ ಜಿಲ್ಲಾಡಳಿತ, ಕೃಷಿ ಇಲಾಖೆ ಮೂಲಕ ಮಾಡಬೇಕು. ದರಖಾಸ್ತು ಮೂಲಕ ಮಂಜೂರಾಗಿರುವ ರೈತರ ಜಮೀನುಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜನಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಖನಿನಂಜಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ಗೋಪಾಲ್, ಜಿಲ್ಲಾ ಸಂಚಾಲಕರಾದ ಮಹೇಶ್ ಮತ್ತು ಮನಿಕೃಷ್ಣಪ್ಪ ಗುಡಿಬಂಡೆ ತಾಲೂಕ ಅಧ್ಯಕ್ಷ ಸೋಮಶೇಖರ್. ಬಸವರಾಜು, ನಾಗರಾಜು, ಅಶ್ವತಪ್ಪ, ನಾರಾಯಣಸ್ವಾಮಿ ಮತ್ತಿತರ ರೈತ ಮುಖಂಡರು ಇದ್ದರು.