ಕನ್ನಡಪ್ರಭ ವಾರ್ತೆ, ಬಸವಕಲ್ಯಾಣಶರಣ ಸ್ಮಾರಕ ಅಭಿವೃದ್ಧಿ ನೆಪದಲ್ಲಿ ಕೆಲವರು ಬಸವಕಲ್ಯಾಣದಲ್ಲಿಯೇ ಅವರ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದು ಬದಲಾಗಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಆಳಂದ ಕೋರಣೇಶ್ವರ ಸ್ವಾಮೀಜಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಬಸವಕಲ್ಯಾಣದ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯ ರಚಿಸಿ ಮಾನವೀಯ ಮೌಲ್ಯಗಳು ನೀಡಿದ್ದಾರೆ. ಜೊತೆಗೆ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದಾರೆ ಎಂದರು.ನಗರದಲ್ಲಿ ಶರಣರ ಸ್ಮಾರಕಗಳ ಬಳಿ ನಿರ್ಮಿಸಲಾದ ನಾಮಫಲಕಗಳಲ್ಲಿ ಇತಿಹಾಸ ತಿರುಚುವ ನಾಮ ಫಲಕವನ್ನು ಅಳವಡಿಸಲಾಗಿದೆ. ಬಸವಕಲ್ಯಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ತಪ್ಪು ಮಾಹಿತಿಯ ಸಂದೇಶ ಹೋಗುತ್ತದೆ. ಜೊತೆಗೆ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಸಂಬಂಧಿತರು ಕೂಡಲೇ ಅಳವಡಿಸಿರುವ ನಾಮಫಲಕ ತೆಗೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಬೇಲೂರನ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಕಳೆದ 1967ರಿಂದ ಶರಣರ ಇತಿಹಾಸ ಅಳಿಸುವ ಕೆಲಸ ನಡೆಯುತ್ತಿದೆ. ಈಗ ಶರಣರ ಕರ್ಮಭೂಮಿಯಾದ ಬಸವಕಲ್ಯಾಣದ ಶರಣರ ಸ್ಮಾರಕಗಳಲ್ಲಿ ಇತಿಹಾಸದ ತಪ್ಪುಗಳನ್ನು ಹೊಂದಿರುವ ನಾಮಫಲಕಗಳನ್ನು ಅಳವಡಿಸುವ ಮೂಲಕ ಸಮಾಜದಲ್ಲಿ ತಪ್ಪು ಸಂದೇಶ ಸಾರಲಾಗುತ್ತಿದೆ ಎಂದುು ಆರೋಪಿಸಿದರು.ಸೇಡಂ ತಂತ್ರ:ಮಾಜಿ ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರಿಗೆ ಬಸವಕಲ್ಯಾಣದಲ್ಲಿ ಏನು ಕೆಲಸ? ಅವರು ಕಲ್ಯಾಣದ ಶರಣರ ಇತಿಹಾಸ ಮರೆಮಾಚಲು ಅವರ ಹಿಂಬಾಲಕರ ಮೂಲಕ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಸೇಡಂ ಅವರ ವಿರುದ್ದ ಶ್ರೀಗಳು ಕಿಡಿ ಕಾರಿದರು.ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರವೀಂದ್ರ ಕೊಳಕೂರ ಮಾತನಾಡಿ, ವಿಕೃತಗೊಳಿಸಿರುವ ನಾಮಫಲಕ ತೆಗೆದು ಸರಿಯಾದ ಮಾಹಿತಿಯುಳ್ಳ ನಾಮಫಲಕ ಅಳವಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವದು ಎಂದು ತಿಳಿಸಿದರು.ಬಸವ ಮಹಾಮನೆಯ ಪೂಜ್ಯ ಸತ್ಯಕ್ಕ ತಾಯಿ, ಆಳಂದನ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಆಕಾಶ ಖಂಡಾಳೆ ಸೇರಿದಂತೆ ಮತ್ತಿತರಿದ್ದರು.