ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
೯ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಅನೇಕ ತಪ್ಪು ಮಾಹಿತಿಗಳಿದ್ದು, ಅವುಗಳನ್ನು ಸರಿಪಡಿಸಬೇಕು, ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾ ಅಧ್ಯಕ್ಷ ಶಿವಕುಮಾರ ಶಾಸ್ತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಶಿರಾಳಕೊಪ್ಪದಲ್ಲಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ೨೦೧೬ರಿಂದ ೨೦೨೪ರವರೆಗೆ ಬಸವಣ್ಣನವರ ಪರಿಚಯವನ್ನು ಮೂರು ಬಾರಿ ಪರಿಷ್ಕರಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ತಪ್ಪು ಮಾಹಿತಿ ಸರಿಪಡಿಸಲು ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ತಪ್ಪು ಮಾಹಿತಿ ಏನು- ಪರಿಷ್ಕೃತಗೊಂಡಿರುವ ಪಠ್ಯದಲ್ಲಿ ವೀರಶೈವ ಪದ ತೆಗೆದು ಹಾಕಲಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿಯೂ ಲಿಂಗಾಯತ ಪದ ಬಳಸಿಲ್ಲ, ಆದರೆ ಪಠ್ಯದಲ್ಲಿ ಲಿಂಗಾಯತ ಪದ ಬಳಸಿರುವುದು ಇತಿಹಾಸವನ್ನು ತಿರುಚಿದಂತಾಗುತ್ತದೆ.ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡಿದ್ದರು, ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಿದ್ದು, ಇದು ಸಹ ತಪ್ಪು ಮಾಹಿತಿ ಆಗಿದೆ ಎಂದು ತಿಳಿಸಿದರು.
ಸಮುದಾಯಕ್ಕೆ ಸಿ.ಎಂ.ಸ್ಥಾನ ಸಿಗಲಿ:ರಾಜ್ಯ ಸರ್ಕಾರದಲ್ಲಿ ಸಿಎಂ. ಹಾಗೂ ಡಿಸಿಎಂ.ಸ್ಥಾನದ ರೇಸಿಗೆ ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ ಎದ್ದಿದ್ದು, ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿ ಆಗಿದೆ. ಆದರೆ ಸಿಎಂ ಸ್ಥಾನವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಿಡಬೇಕು ಎಂಬ ಆಗ್ರಹ ಕೇಳಿ ಬಂದಿದ್ದು, ಈ ಸಮುದಾಯಕ್ಕೆ ಒಕ್ಕಲಿಗರ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ವಿರಶೈವ ಲಿಂಗಾಯತ ಸಂಘಟನಾ ವೇದಿಕೆ ಆಗ್ರಹಿಸುತ್ತದೆ ಎಂದು ಶಿವಕುಮಾರ ಶಾಸ್ತ್ರಿ ತಿಳಿಸಿದ್ದಾರೆ.