ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಕಾರಿಡಾರ್‌!

| Published : Nov 07 2025, 02:15 AM IST

ಸಾರಾಂಶ

ದೇವಸ್ಥಾನದ ಅಭಿವೃದ್ಧಿಗೆ ಕಾರಿಡಾರ್‌ ನಿರ್ಮಾಣ ಮಾಡಿದರೆ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಲಿದೆ. ದೇವಸ್ಥಾನಕ್ಕೆ ನಾಲ್ಕು ಕಡೆಗಳಿಂದ ರಸ್ತೆ, ಉದ್ಯಾನವನ, ಶೌಚಾಲಯ ಸೇರಿದಂತೆ ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ಧಿಗೊಳಿಸುವ ಉದ್ದೇಶವಿದೆ.

ಹುಬ್ಬಳ್ಳಿ:

ಇತಿಹಾಸ ಪ್ರಸಿದ್ಧಿ ಹೊಂದಿರುವ ಇಲ್ಲಿನ ಉಣಕಲ್‌ನ ಶ್ರೀಚಂದ್ರಮೌಳೇಶ್ವರ ದೇವಸ್ಥಾನ ಕಾರಿಡಾರ್‌ ನಿರ್ಮಾಣಕ್ಕಾಗಿ ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ (ಫಿಟಿಷನ್‌ ಕಮಿಟಿ) ನಿರ್ಧರಿಸಿದೆ. ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕಾರಿಡಾರ್‌ ನಿರ್ಮಾಣ, ನಿವಾಸಿಗಳ ಸ್ಥಳಾಂತರ ಎಲ್ಲವೂ ಪ್ರಸ್ತಾವನೆಯಲ್ಲಿ ಅಡಕವಾಗಲಿದೆ.

ಚಂದ್ರಮೌಳೇಶ್ವರ ದೇವಸ್ಥಾನದ ಕಾರಿಡಾರ್‌ ನಿರ್ಮಾಣವಾಗಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಎರಡು ವರ್ಷದ ಹಿಂದೆ ಈ ಕುರಿತು ಸಮಗ್ರ ಅಧ್ಯಯನ ನಡೆಸಲಾಗಿತ್ತು. ಸಮೀಕ್ಷೆ ಕೂಡ ಪೂರ್ಣಗೊಳಿಸಿ ಡಿಪಿಆರ್‌ ಸಿದ್ಧಪಡಿಸಿರುವುದುಂಟು. ಆದರೆ, ಕಾರಿಡಾರ್‌ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಫಿಟಿಷನ್‌ ಕಮಿಟಿ ಭೇಟಿ ನೀಡಿ ಪರಿಶೀಲನೆ ನಡೆಸುವುದು ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಫಿಟಿಷನ್‌ ಕಮಿಟಿ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿಯಲ್ಲಿ ಬರುವ ಈ ದೇವಸ್ಥಾನ ಯಾವ ಸ್ಥಿತಿಯಲ್ಲಿದೆ. ದೇಶದ ಎಲ್ಲೆಲ್ಲಿಂದ ಭಕ್ತರು ಬರುತ್ತಾರೆ. ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರಿಡಾರ್‌ ನಿರ್ಮಾಣ ಮಾಡುವುದರಿಂದ ಎಷ್ಟು ಆಸ್ತಿಗಳನ್ನು ಸ್ಥಳಾಂತರಿಸಬೇಕು. ಅದಕ್ಕೆ ಎಷ್ಟು ವೆಚ್ಚ ತಗುಲಬಹುದು. ಸುತ್ತಮುತ್ತಲು ಇರುವ ನಿವಾಸಿಗಳನ್ನು ಎಲ್ಲಿಗೆ ಸ್ಥಳಾಂತರ ಮಾಡಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿತು. ಅಲ್ಲದೇ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿಯನ್ನು ತಂಡ ಪಡೆಯಿತು.

ದೇವಸ್ಥಾನ ಅಭಿವೃದ್ಧಿಗೆ ಕಾರಿಡಾರ್‌ ನಿರ್ಮಾಣ ಅಗತ್ಯ ಎಂಬುದನ್ನು ಅಭಿಪ್ರಾಯ ಪಟ್ಟ ಕಮಿಟಿ, ಈ ಹಿನ್ನೆಲೆಯಲ್ಲಿ ನ. 10ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಜತೆಗೆ ಕಾರಿಡಾರ್‌ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ ನೀಡುವಂತೆ ತಿಳಿಸಲಾಗುವುದು. ಬಳಿಕ ಯೋಜನೆಗೆ ಬೇಕಾದ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಮಿಟಿ ನಿರ್ಧರಿಸಿತು.

ಪರಿಶೀಲನೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನಸಭೆ ಉಪಾಧ್ಯಕ್ಷರೂ ಆಗಿರುವ ಕಮಿಟಿ ಅಧ್ಯಕ್ಷ ರುದ್ರಪ್ಪ ಲಮಾಣಿ, ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿದೆ. ದೇಶದ ನಾನಾ ಭಾಗಗಳಿಂದ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಪುಣೆ, ಮುಂಬೈ ಸೇರಿದಂತೆ ಹಲವೆಡೆ ಜನರು ಬರುತ್ತಾರೆ. ಆದರೆ ದೇವಸ್ಥಾನಕ್ಕೆ ಭೇಟಿ ನೀಡಲು ಸರಿಯಾದ ದಾರಿ ಕೂಡ ಇಲ್ಲ. ದೇವಸ್ಥಾನದ ಅಭಿವೃದ್ಧಿ ಕುರಿತು ಶಾಸಕರು ಸಮಿತಿಗೆ ತಿಳಿಸಿದ್ದರು. ಅದರಂತೆ ಸಮಿತಿಯು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂದರು.

ಏನೇನು ಇರಲಿದೆ:

ದೇವಸ್ಥಾನದ ಅಭಿವೃದ್ಧಿಗೆ ಕಾರಿಡಾರ್‌ ನಿರ್ಮಾಣ ಮಾಡಿದರೆ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಲಿದೆ. ದೇವಸ್ಥಾನಕ್ಕೆ ನಾಲ್ಕು ಕಡೆಗಳಿಂದ ರಸ್ತೆ, ಉದ್ಯಾನವನ, ಶೌಚಾಲಯ ಸೇರಿದಂತೆ ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ಧಿಗೊಳಿಸುವ ಉದ್ದೇಶವಿದೆ. ಈ ದೇವಸ್ಥಾನ ಪುರಾತತ್ವ ಇಲಾಖೆ ಅಡಿಯಲ್ಲಿದ್ದು, ಮುಜರಾಯಿ ಇಲಾಖೆಯ ಸಿ ವರ್ಗಕ್ಕೆ ಸೇರಿದೆ. ದೇವಸ್ಥಾನಕ್ಕೆ ಯಾವುದೇ ಆದಾಯವೂ ಇಲ್ಲ. ಅಭಿವೃದ್ಧಿಯಾದರೆ ಆದಾಯವೂ ಹೆಚ್ಚಾಗುತ್ತದೆ ಎಂದು ಲಮಾಣಿ ಹೇಳಿದರು.

ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ₹ 25 ಕೋಟಿ ಬೇಕು. ಇದರಲ್ಲಿ ಭೂಸ್ವಾಧೀನ ಕೂಡ ಸೇರಿದೆ. ದೇವಸ್ಥಾನದ ಸುತ್ತಲೂ 53 ಮನೆ, 15 ಖಾಲಿ ಜಾಗೆ ಸೇರಿ 68 ಆಸ್ತಿಗಳಿವೆ. ಭೂಸ್ವಾಧೀನ ಮಾಡಿಕೊಳ್ಳಬೇಕಿರುವ ಜಾಗದ ಮೌಲ್ಯ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ದರಪಟ್ಟಿ- 2019ರ ಅನ್ವಯ ₹18 ಕೋಟಿ ಆಗುತ್ತದೆ. ಇನ್ನುಳಿದ ₹7 ಕೋಟಿ ವೆಚ್ಚದಲ್ಲಿ ದೇವಸ್ಥಾನ ಆವರಣದಲ್ಲಿ ಕಾಂಪೌಂಡ್, ರಸ್ತೆ, ಕುಡಿಯುವ ನೀರು ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಸಮಗ್ರ ಕಾರಿಡಾರ್‌ ನಿರ್ಮಾಣದ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಐತಿಹಾಸಿಕ ಫಿಟಿಷನ್‌ ಕಮಿಟಿ ಸಭೆ ನಡೆದಿದೆ. ಈಗಿರುವ ಸಮಿತಿಯ ಅವಧಿ ಪೂರ್ಣಗೊಂಡಿದ್ದು, ದೇವಸ್ಥಾನ ಕಾರಿಡಾರ್‌ ಅಭಿವೃದ್ಧಿಯಾದರೆ ಸಾಕಷ್ಟು ಅನುಕೂಲವಾಗಲಿದೆ. ಈ ಸಂಬಂಧ ಸಮೀಕ್ಷೆ ನಡೆಸಿ ಡಿಪಿಆರ್‌ ಸಿದ್ಧಪಡಿಸಲಾಗಿದೆ ಎಂದರು.

ಐದು ವಿಷಯಗಳ ಚರ್ಚೆ:

ಫಿಟಿಷನ್‌ ಕಮಿಟಿ ಸಭೆಯಲ್ಲಿ ಹುಬ್ಬಳ್ಳಿಗೆ ಸಂಬಂಧಿಸಿದ ಐದು ವಿಷಯಗಳ ಕುರಿತು ಮಾತ್ರ ಚರ್ಚಿಸಲಾಗಿದೆ. ಇದರಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು. ಹು-ಧಾ ಮಹಾನಗರದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಜೈ ಹನುಮಾನ ನಗರದಲ್ಲಿ ಆಶ್ರಯ ಮನೆಗಳ ನಿರ್ಮಾಣ, ರಸ್ತೆಗಳ ಅಗಲೀಕರಣ ಹಾಗೂ ಅತಿಕ್ರಮಣ ತೆರವು, ಮತಕ್ಷೇತ್ರ ವ್ಯಾಪ್ತಿಯ ನಗರದ 6 ಕೆರೆಗಳಲ್ಲಿ ಸಂತೋಷ ನಗರದ ಕೆರೆ, ಉಣಕಲ್ಲಿನ ಚಂದಪ್ಪನ ಕೆರೆ, ನಾಗಶೆಟ್ಟಿಕೊಪ್ಪ ಕೆರೆಗೆ ಆದ್ಯತೆಯ ಮೇರೆಗೆ ಕಾಯಕಲ್ಪ ಹಾಗೂ ಸಂರಕ್ಷಣೆ ಮಾಡುವ ಕುರಿತು ಚರ್ಚಿಸಲಾಯಿತು ಎಂದರು.

ತಂಡದಲ್ಲಿ ಸಮಿತಿ ಸದಸ್ಯರಾದ ಎಸ್‌. ಸುರೇಶಕುಮಾರ, ಎ. ಮಂಜು, ಸಿ.ಎನ್‌. ಬಾಲಕೃಷ್ಣ, ಎಚ್‌.ಡಿ. ತಮ್ಮಯ್ಯ, ದರ್ಶನ ಪುಟ್ಟಣ್ಣಯ್ಯ, ಡಾ. ಅವಿನಾಶ ಜಾಧವ, ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ ಸೇರಿದಂತೆ ಭಾರತೀಯ ಪುರಾತತ್ವ ಇಲಾಖೆ ಆಧಿಕಾರಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.