ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗದ ಆರೋಪದ ಮೇರೆಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‌ರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಹೇಮಂತ್ ಆದೇಶ ಹೊರಡಿಸಿದ್ದಾರೆ.
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಕರ್ತವ್ಯ ಲೋಪ ಹಾಗೂ ಹಣ ದುರುಪಯೋಗದ ಆರೋಪದ ಮೇರೆಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‌ರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಹೇಮಂತ್ ಆದೇಶ ಹೊರಡಿಸಿದ್ದಾರೆ. ಬೆನ್ನಲ್ಲೇ ಇವರ ವಿರುದ್ಧ ನಡೆದ ತನಿಖೆಯಲ್ಲಿ ಹೊರ ಬಿದ್ದ ಮಾಹಿತಿ ಕಂಡು ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳು ದಂಗು ಬಡಿದಿದ್ದಾರೆ.
ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಜಿ.ಪಂ. ಸಿಇಒ ಹೇಮಂತ್ ಈ ಕ್ರಮ ಜರುಗಿಸಿದ್ದಾರೆ.ಕರ್ತವ್ಯ ಲೋಪ ಮತ್ತು ಹಣ ದುರುಪಯೋಗದ ಆರೋಪ ಸಂಬಂಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ) ಅಡಿ ಕೆ.ಎನ್.ಸುರೇಶ್ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ದಂಗು ಬಡಿಸಿದ ಹಗರಣ ವಿವರ: ಶಿವಮೊಗ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಖರೀದಿ ಹಾಗೂ ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಅವ್ಯವಾರ ಮತ್ತು ಕರ್ತವ್ಯ ಲೋಪ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಜುಲೈನಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ದಾಖಲಾತಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಲೋಪ ಎಸಗಿರುವುದು ದೃಢಪಟ್ಟಿತ್ತು.ಆರ್ ಎಂ ಎಲ್ ನಗರದ ಮುಖ್ಯರಸ್ತೆಯಲ್ಲಿರುವ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 14,55,429 ರೂಪಾಯಿ ಬಾಡಿಗೆಯನ್ನು ಒಪ್ಪಂದದಂತೆ ಪಾವತಿಸದಿರುವುದು.
2024- 25 ಹಾಗೂ 2025- 26ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗಾಗಿ ಆಬ್ಜೆಕ್ಟ್ ಕೋಡ್ 090 ಅಡಿ 198.12 ಲಕ್ಷ ಹಾಗೂ 388.35 ಲಕ್ಷ ರು. ಬಿಡುಗಡೆಯಾಗಿದ್ದರೂ ವಿದ್ಯಾರ್ಥಿ ನಿಲಯಗಳ ಬಾಡಿಗೆ ಬಾಕಿ ಉಳಿಸಿಕೊಂಡು ಇತರೆ ಖರ್ಚುಗಳಿಗೆ ಈ ಹಣವನ್ನು ಬಳಕೆ ಮಾಡುವ ಮೂಲಕ ಕ್ರಿಯಾ ಯೋಜನೆಯನ್ನು ಉಲ್ಲಂಘಿಸಿರುವುದು, ಬಾಕಿ ಇರುವ ಮೊತ್ತದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸದೆ ಬಾಡಿಗೆಗೆ ಸಂಬಂಧಿಸಿದ ಡಿಸಿಬಿ ವಿವರಗಳನ್ನು ನಿಯಮಾನಸಾರ ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸೆಗಿರುವುದು ಕಂಡುಬಂದಿತು.ಅಷ್ಟೇ ಅಲ್ಲದೆ ಸದರಿ ಹಾಸ್ಟೆಲ್‌ನ ವಿದ್ಯುತ್ ವೆಚ್ಚ ಪಾವತಿಯಲ್ಲೂ ಸುರೇಶ್ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಬಾಡಿಗೆ ಕರಾರು ಒಪ್ಪಂದದ ನಿಬಂಧನೆಯಂತೆ ವಿದ್ಯುತ್ ವೆಚ್ಚವನ್ನು ಇಲಾಖೆಯೇ ಭರಿಸಬೇಕು. ಆದರೆ ಇಲ್ಲಿ ಕಟ್ಟಡದ ವಿದ್ಯುತ್ ಬಿಲ್ ಪಾವತಿ ಆಗದಿರುವ ಬಗ್ಗೆ ಮಾಲೀಕರೊಂದಿಗಾಗಲಿ ಅಥವಾ ಮೆಸ್ಕಾಂ ಇಲಾಖೆಯೊಂದಿಗಾಗಲೀ ಸುರೇಶ್ ಯಾವುದೇ ಪತ್ರ ವ್ಯವಹಾರ ನಡೆಸದೆ ನಿರ್ಲಕ್ಷ ತೋರಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿತ್ತು. 2024- 25ನೇ ಸಾಲಿನಲ್ಲಿ 8,55,429 ರು. ವಿದ್ಯುತ್ ಬಾಕಿ ಉಳಿಸಿಕೊಂಡಿದ್ದು ಇದನ್ನು 2025- 26ನೇ ಸಾಲಿನಲ್ಲೂ ಪಾವತಿಸಿಲ್ಲ. ಅಲ್ಲದೆ 2025- 26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಈ ಮೊತ್ತವನ್ನು ಅಳವಡಿಸದೆ ಬಜೆಟ್ ತಯಾರಿ ವೇಳೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿತ್ತು. 2025-26ನೇ ಸಾಲಿನಲ್ಲಿ ಸುಮಾರು 3 ಲಕ್ಷ ಹಾಗೂ 2026- 27ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸುಮಾರು 3 ಲಕ್ಷ ವಿದ್ಯುತ್ ಬಿಲ್ ಪಾವತಿಸದೆ ನಿರ್ಲಕ್ಷಿಸಿರುವುದು ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.ಖರೀದಿಯಲ್ಲೂ ಲೋಪ: ಇನ್ನು ಜಿ.ಪಂ. ಲೆಕ್ಕ ಪರಿಶೋಧನಾ ತಂಡ 2019-20 ರಿಂದ 2025-26ರವರೆಗೆ ಲೆಕ್ಕ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ಮೆಟ್ರಿಕ್ ನಂತರದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ಸರಕು ಖರೀದಿಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿದೆ.
2025-26ನೇ ಸಾಲಿನಲ್ಲಿ ಮಾಡಿರುವುದರಲ್ಲಿ ಲೋಪ ಎಸಗಲಾಗಿದ್ದು, ಬೊಮ್ಮನಕಟ್ಟೆ, ಬಾಪೂಜಿನಗರ ಮತ್ತು ನವುಲೆಯಲ್ಲಿರುವ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ 4,36,285 ರುಪಾಯಿ ಮೊತ್ತದ ಸೋಲಾರ್ ವಾಟರ್ ಹೀಟರ್ ಅನ್ನು ಖರೀದಿಸಿದ್ದಾಗಿ ತೋರಿಸಲಾಗಿದೆ. ಆದರೆ ಮುಖ್ಯ ಲೆಕ್ಕಾಧಿಕಾರಿ ಬಾಪೂಜಿನಗರದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದಾಗ ಯಾವುದೇ ಸೋಲಾರ್ ಹೀಟರ್ ಅಳವಡಿಸದೆ ಇರುವುದು, ಬಹಳ ವರ್ಷದಷ್ಟು ಹಳೆಯದಾದ ಸೋಲಾರ್ ಹೀಟರ್ ಬಳಸುತ್ತಿದ್ದು ಹಾಗೂ ನಾಲ್ಕೈದು ತಿಂಗಳಿಂದ ಇದು ಸಹ ಕೆಟ್ಟು ಹೋಗಿ ಬಿಸಿ ನೀರು ಬರದೇ ಇರುವುದನ್ನು ಪತ್ತೆ ಹಚ್ಚಿದರು. ಇದು ಮಾತ್ರವಲ್ಲದೆ, ಖರೀದಿಸಲಾಗಿದೆ ಎಂದು ಹೇಳಲಾದ ಸೋಲಾರ್ ವಾಟರ್ ಹೀಟರ್ ಬಗ್ಗೆ ಹಾಸ್ಟೆಲ್ ದಾಸ್ತಾನು ವಹಿಯಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ. ಅದೇ ಹಾಸ್ಟೆಲ್ ವಾರ್ಡನ್ ಸಹ ಸಹಾಯಕ ನಿರ್ದೇಶಕರ ಕಚೇರಿಗೆ ಪತ್ರ ಬರೆದು ಯಾವುದೇ ಸೋಲಾರ್ ವಾಟರ್ ಹೀಟರ್ ಸರಬರಾಜಾಗಿಲ್ಲ ಎಂದು ತಿಳಿಸಿದ್ದಾರೆ.ಒಂದು ಲಕ್ಷ ಮೊತ್ತ ಮೀರುವ ಯಾವುದೇ ವಸ್ತುವನ್ನು ಕೆಟಿಪಿಪಿ ನಿಯಮನುಸಾರ ಖರೀದಿಸಬೇಕಾಗಿರುವುದು, ಬಿಲ್ ಪಾವತಿಸುವ ಮುನ್ನ ಸಾಮಗ್ರಿಗಳು ಸುಸ್ಥಿತಿಯಲ್ಲಿ ಸರಬರಾಜಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಸಹಾಯಕ ನಿರ್ದೇಶಕರ ಕರ್ತವ್ಯವಾಗಿದ್ದರೂ ಇದನ್ನೆಲ್ಲಾ ಅವರು ಉಲ್ಲಂಘಿಸಿದ್ದಾರೆ.ಉಳಿದವರ ಪಾತ್ರವೇನು?: ಇನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅವರ ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಕುರಿತ ಪ್ರಕರಣದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳ ಪಾತ್ರದ ಬಗ್ಗೆ ಈಗಾಗಲೇ ಇಲಾಖೆಯಲ್ಲಿ ಚರ್ಚೆ ಆರಂಭಗೊಂಡಿದೆ.
ಇಡ್ಲಿ ಬಾಯ್ಲರ್ ಖರೀದಿ ಹಗರಣಇನ್ನು ತಮ್ಮ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಬಾಲಕಿಯರ ವಿವಿಧ 15 ಹಾಸ್ಟೆಲ್‌ಗಳಿಗೆ ಇಡ್ಲಿ ಸ್ಟೀಮ್ ಬಾಯ್ಲರ್ ಖರೀದಿಯಲ್ಲಿ ಕೂಡ ಭ್ರಷ್ಟಾಚಾರ ನಡೆದಿರುವುದನ್ನು ಇಲಾಖಾ ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ.
ತಲಾ 120 ಇಡ್ಲಿ ಸಿದ್ಧವಾಗುವ 15 ಸ್ಟೀಮ್ ಬಾಯ್ಲರ್ ಇಡ್ಲಿ ಸೆಟ್ಟನ್ನು 14.67 ಲಕ್ಷ ರು. ವೆಚ್ಚದಲ್ಲಿ ವಿವಿಧ ಏಜೆನ್ಸಿಗಳಿಂದ ಖರೀದಿಸಲಾಗಿದೆ. ವಾಸ್ತವವಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ 2 ಲಕ್ಷ ರು. ಮೊತ್ತದ ಒಳಗಿನ ಸಾಮಗ್ರಿ ಖರೀದಿಗೆ ಮಾತ್ರ ಅವಕಾಶ ಇದ್ದರೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆಯದೆ 14.67 ಲಕ್ಷದ ಸಾಮಗ್ರಿಗಳನ್ನು ಖರೀದಿಸಿರುವುದು, ಟೆಂಡರ್ ಕರೆಯುವುದರಿಂದ ತಪ್ಪಿಸಿಕೊಳ್ಳಲು ಖರೀದಿಯನ್ನು 1 ಲಕ್ಷ ರು. ಒಳಗೆ ವಿಭಜಿಸಿರುವುದು, ಮಾರುಕಟ್ಟೆಯಲ್ಲಿ 40 ಸಾವಿರ ರುಪಾಯಿ ಮೀರದ ಇಡ್ಲಿ ಸೆಟ್ಟಿಗೆ ಮೂರು ಪಟ್ಟು ಹೆಚ್ಚಿನ ಹಣ ಪಾವತಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿರುವುದು ಪತ್ತೆ ಹಚ್ಚಲಾಗಿದೆ.ನೋಟೀಸ್‌ಗೆ ಉತ್ತರವಿಲ್ಲ: ಕರ್ತವ್ಯ ಲೋಪ ಮತ್ತು ಹಣ ದುರುಪಯೋಗದ ಕುರಿತಂತೆ ಮುಖ್ಯ ಲೆಕ್ಕಾಧಿಕಾರಿ ನೇತೃತ್ವದ ತಂಡ ನೀಡಿದ ವರದಿ ಆಧರಿಸಿ ಕಾರಣ ಕೇಳಿ ಜಾರಿ ಮಾಡಿದ ನೋಟಿಸ್‌ಗೆ ಉತ್ತರಿಸುವಲ್ಲಿ ಸಹಾಯಕ ನಿರ್ದೇಶಕ ಸುರೇಶ್ ವಿಫಲರಾಗಿದ್ದಾರೆ.
ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರನಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೆ ಕರ್ತವ್ಯ ಲೋಪ ಮತ್ತು ದುರ್ನಡತೆ ಎಸಗಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಎಲ್ಲಾ ಅಂಶದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ಸುರೇಶರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ. ಸಿಇಒ ಹೇಮಂತ್ ಆದೇಶ ಹೊರಡಿಸಿದ್ದಾರೆ.