ಸಾರಾಂಶ
ಸಹ್ಯಾದ್ರಿ ಕೇಂದ್ರಿಯ ಮಾದರಿ ಶಾಲೆಯ 2024-25ನೇ ಸಾಲಿನ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಹಾಗೂ ಭ್ರಷ್ಟಾಚಾರಗಳು ವಿದ್ಯಾವಂತರಿಂದಲೇ ನಡೆಯುತ್ತಿರುವುದು ಆತಂಕದ ಸಂಗತಿ. ಹೀಗಾಗಿ ಇಂದಿನ ಮಕ್ಕಳಿಗೆ ಹೆತ್ತವರನ್ನು ಪೋಷಿಸುವ ಬದ್ಧತೆಯೊಂದಿಗೆ ದೇಶಪ್ರೇಮ ಮೂಡಿಸುವ ಸಂಸ್ಕಾರಯುತ ಶಿಕ್ಷಣ ನೀಡುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ಪಟ್ಟಣದ ಸಹ್ಯಾದ್ರಿ ಕೇಂದ್ರೀಯ ಮಾದರಿ ಶಾಲೆಯ 2024-25ನೇ ಸಾಲಿನ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಸಚ್ಚಾರಿತ್ಯದೊಂದಿಗೆ ರಾಷ್ಟ್ರಭಕ್ತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಪೋಷಕರು ಕರಾವಳಿ ಜಿಲ್ಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದನ್ನು ತಪ್ಪಿಸಿ ಕಳೆದ ಮೂರುವರೆ ದಶಕಗಳಿಂದ ಈ ಭಾಗದ ವಿಧ್ಯಾರ್ಥಿಗಳಿಗೆ ಹೆಚ್ಚು ಶುಲ್ಕದ ಹೊರೆ ಇಲ್ಲದಂತೆ ಸ್ಥಳೀಯವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕೊಡುಗೆ ಅನನ್ಯವಾಗಿದೆ ಎಂದರು.ಭಾರತೀಯ ಸಂಸ್ಕೃತಿಯಲ್ಲಿ ಹೆತ್ತವರನ್ನು ಅವರ ಕೊನೆಗಳಿಗೆಯಲ್ಲಿ ವೃದ್ಧಾಶ್ರಮಕ್ಕೆ ಸೇರಿಸದೆ ಮಗುವಿನಂತೆ ಪ್ರೀತಿಸಿ ಕರ್ತವ್ಯ ಪ್ರಜ್ಞೆಯ ಶಿಕ್ಷಣ ಮೂಡಿಸಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಬಾಳೇಹಳ್ಳಿ ಪ್ರಭಾಕರ್ ಮಾತನಾಡಿ, ಐಸಿಎಸ್‍ಇ ಶಿಕ್ಷಣ ಮಾದರಿಯ ಈ ಶಾಲೆಯಲ್ಲಿ ಕೇವಲ ಅಂಕಗಳಿಗೆ ಆದ್ಯತೆ ನೀಡದೆ ವಿಧ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದೇವೆ. ಫಲಿತಾಂಶ ಕ್ರೀಡೆ ಸೇರಿದಂತೆ ರಾಜ್ಯ ಮಟ್ಟದಲ್ಲಿ ಈ ಶಾಲೆ ಗಮನ ಸೆಳೆದಿದೆ ಎಂದರು.ಈ ವೇಳೆ ತಹಸೀಲ್ದಾರ್ ಎಸ್.ರಂಜಿತ್, ಹೊದಲ ಅರಳಾಪುರ ಗ್ರಾಪಂ ಅಧ್ಯಕ್ಷೆ ಅನಿತಾ ಶ್ರೀಧರ್, ಜಿ.ಎನ್.ಪ್ರಕಾಶ್, ಪ್ರಾಂಶುಪಾಲ ಜಗದೀಶ್ ಇದ್ದರು.
;Resize=(128,128))
;Resize=(128,128))