ಒಬ್ಬನಿಂದ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಿಲ್ಲ: ಸಂತೋಷ್ ಹೆಗ್ಡೆ

| Published : Jan 15 2024, 01:54 AM IST / Updated: Jan 15 2024, 04:26 PM IST

ಒಬ್ಬನಿಂದ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಿಲ್ಲ: ಸಂತೋಷ್ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಭ್ರಷ್ಟಾಚಾರವು ತಾಂಡವಾಡುತ್ತಿದೆ. ಇದು ಕೇವಲ ಒಬ್ಬ ವ್ಯಕ್ತಿಯ ನಡೆಯಲ್ಲ ಇಡೀ ಸಮುದಾಯದ ಉದಾಸೀನ ನಡೆಯೇ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. ಚನ್ನರಾಯಪಟ್ಟಣದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಭ್ರಷ್ಟಾಚಾರವು ತಾಂಡವಾಡುತ್ತಿದೆ. ಇದು ಕೇವಲ ಒಬ್ಬ ವ್ಯಕ್ತಿಯ ನಡೆಯಲ್ಲ ಇಡೀ ಸಮುದಾಯದ ಉದಾಸೀನ ನಡೆಯೇ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ವಿವೇಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಹಣ ಮಾಡಬೇಕು ಎಂಬ ಆಸೆ ಇರುವುದು ಸಹಜ. 

ಆದರೆ ದುರಾಸೆಯಿಂದ ಬಡವರ ಜೇಬಿಗೆ ಕೈ ಹಾಕುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಒಬ್ಬ ಭ್ರಷ್ಟ ವ್ಯಕ್ತಿಯನ್ನು ಹಿಡಿದು ಜೈಲಿಗೆ ಕಳಿಸಿದರೆ ಆ ವ್ಯಕ್ತಿಗೆ ಶಿಕ್ಷೆ ಆಗಲು ಹಲವು ವರ್ಷಗಳೇ ಬೇಕಾಗುತ್ತವೆ. 

ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ವ್ಯಕ್ತಿಯು ಬೇಲ್ ಪಡೆದು ಬಂದು ಸಮಾಜದಲ್ಲಿ ರಾಜಾರೋಷವಾಗಿ ಓಡಾಡುತ್ತಿರುತ್ತಾರೆ. ಇಂಥ ವ್ಯಕ್ತಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ನನ್ನಂಥ ಒಬ್ಬರಿಂದ ಸಾಧ್ಯವಿಲ್ಲ. ಇಡೀ ಸಮಾಜ ಇಂತಹ ಭ್ರಷ್ಟರನ್ನು ಶಿಕ್ಷಿಸಲು ಕಾನೂನಿನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

‘ನನಗೆ ೮೪ ವರ್ಷ ವಯಸ್ಸು ಈ ವಯಸ್ಸಿನಲ್ಲೂ ಸಹ ೧೯೦೦ ಉಪನ್ಯಾಸಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವುದೇ ಕಾರ್ಯಕ್ರಮಕ್ಕೂ ಹೋದರೂ ಸಹ ಯಾವುದೇ ತರಹದ ಸಂಭಾವನೆಯನ್ನು ಪಡೆಯುವುದಿಲ್ಲ.

ನಾನು ನನ್ನ ಸ್ವಂತ ಖರ್ಚಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಸಮಾಜಕ್ಕೆ ಜಾಗೃತಿ ಮೂಡಿಸುವ ಉಪನ್ಯಾಸಗಳನ್ನು ನೀಡುತ್ತಿದ್ದೇನೆ. 

ಯುವ ಸಮೂಹಕ್ಕೆ ಉತ್ತಮ ರೀತಿಯ ಸಂದೇಶವನ್ನು ನೀಡುವ ಮುಖಾಂತರ ನನ್ನಲ್ಲಿರುವ ಶಕ್ತಿಯನ್ನು ಈ ಸಮಾಜದ ಭ್ರಷ್ಟಾಚಾರ ವ್ಯವಸ್ಥೆಯನ್ನು ಬುಡ ಸಮೇತ ತೆಗೆದು ಹಾಕಲು, ಭ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬ ಸಂಕಲ್ಪಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ, ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಗೀತಾ ದಿನೇಶ್, ಪ್ರಾಂಶುಪಾಲೆ ರೂಪ ಕರುಬಯ್ಯ ಸೇರಿದಂತೆ ಇತರರು ಹಾಜರಿದ್ದರು.

ಚೆನ್ನರಾಯಪಟ್ಟಣದ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ವಿವೇಕ ವೈಭವ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಉದ್ಘಾಟಿಸಿದರು.