ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಪ್ರಬಲವಾಗಿ ಸ್ಪರ್ಧಿಸಲಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ ಹಲಗಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ಮುಕ್ತ, ಜನಕೇಂದ್ರಿತ ಆಡಳಿತವನ್ನು ತರುವ ಗುರಿಯೊಂದಿಗೆ ಕರ್ನಾಟಕದಾದ್ಯಂತ ಬಲಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಪ್ರಬಲವಾಗಿ ಸ್ಪರ್ಧಿಸಲಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ ಹಲಗಿಗೌಡರ ಹೇಳಿದರು.

ನಗರದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಪೂರ್ವ ಸಿದ್ಧತೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ಪಕ್ಷದ ಕಾರ್ಯಕರ್ತರು ಈ ಸಭೆಯಿಂದ ಹೊಸ ಉತ್ಸಾಹದೊಂದಿಗೆ ಹೊರಬಂದಿದ್ದು, ಜಿಲ್ಲೆಯಾದ್ಯಂತ ಗ್ರಾಮ- ಗ್ರಾಮಗಳಲ್ಲಿ ಜನರನ್ನು ಭೇಟಿಯಾಗಿ ಪಕ್ಷದ ಸಂದೇಶವನ್ನು ತಲುಪಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷವು ಜನರ ಆಶಯಗಳನ್ನು ಈಡೇರಿಸುವ ದೃಢ ಸಂಕಲ್ಪದೊಂದಿಗೆ ಜಿಲ್ಲೆಯಲ್ಲಿ ಮುಂದುವರೆಯುತ್ತಿದೆ. ಈ ಸಭೆಯು ಪಂಚಾಯತ್ ಚುನಾವಣೆಗೆ ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.

ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದ ಈ ಸಭೆಯಲ್ಲಿ ಎಲ್ಲಾ ತಾಲೂಕುಗಳಿಂದ ಬಂದ ಪ್ರತಿನಿಧಿಗಳು ಚುನಾವಣಾ ತಯಾರಿ, ಅಭ್ಯರ್ಥಿ ಆಯ್ಕೆ, ಬೂತ್ ಮಟ್ಟದ ಸಂಘಟನೆ, ಜನರೊಂದಿಗಿನ ಸಂಪರ್ಕ ವೃದ್ಧಿ ಮತ್ತು ಪ್ರಚಾರದ ಯೋಜನೆಗಳ ಬಗ್ಗೆ ಚರ್ಚಿಸಿದರು. ಚುನಾವಣಾ ಸಮಿತಿಗಳ ರಚನೆ, ಕಾರ್ಯಕರ್ತರ ತರಬೇತಿ, ಮತದಾರರ ಪಟ್ಟಿ ಪರಿಶೀಲನೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರದ ರಣತಂತ್ರಗಳನ್ನು ರೂಪಿಸಲಾಯಿತು.

ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಜಿಲ್ಲೆಯ ಜಗದೇವ ಸೂರ್ಯವಂಶಿ, ಲಕ್ಷ್ಮಣ ಕಂಬಾಗಿ, ಸಿದ್ದರಾಮ ಹಳ್ಳೂರ, ಮೈಲಾರಪ್ಪ ಸೌದಾಗರ, ಶಂಕರ ಸಾತ್ಪುತೆ, ಅಪ್ಪು ಭೂತನಾಳ, ಇಂದುಮತಿ ಜಾಲವಾದಿ, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ, ನೀಲಾಂಬಿಕಾ ಬಿರಾದಾರ, ಪರಶುರಾಮ ಹೊಸಮನಿ, ಸಿದ್ದರಾಮ ನರಳೆ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜ್ಯ ಕಾರ್ಯದರ್ಶಿ ಫರೀದ ನದಾಫ್, ಆಪ್ ಮುಖಂಡರಾದ ಶಿವು ಕೊಳ್ಳಾರಿ, ಅಪ್ಪನಗೌಡ ಪಾಟೀಲ, ಸಂಜು ಶೆಟಗಾರ, ಬಾಬು ಬಿಜಾಪುರ, ಅವಿನಾಶ ಐಹೊಳೆ, ರಮೇಶ ದೊಡ್ಡಮನಿ, ಚಂದ್ರಕುಮಾರ ಸೇರಿದಂತೆ ಹಲವರಿದ್ದರು.