ಸಾರಾಂಶ
ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣವನ್ನು ಕೂಡ ಹಿಂಪಡೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ. ಈಗಾಗಲೇ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಸಿದ್ದೇವೆ. ಸಂಪುಟದಲ್ಲಿನ ನಿರ್ಣಯ ವಾಪಸು ಪಡೆಯಬೇಕೆಂದು ಆಗ್ರಹಿಸಿ ಚುನಾವಣೆ ಮುಗಿದ ತಕ್ಷಣ ಹುಬ್ಬಳಿ ಚಲೋ ನಡೆಸಲಿದ್ದೇವೆ,
ಬೆಳ್ತಂಗಡಿ : ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಮತಾಂದರನ್ನು ಓಲೈಸುವ ಸರ್ಕಾರವಾಗಿದೆ. ಮುಡಾ ಹಗರಣದಲ್ಲಿ ಕಾನೂನು ಕುಣಿಕೆ ಬಿಗಿಯಾಗುತ್ತಿರುವುದನ್ನು ಅರಿತು ಅಲ್ಲಿಂದ ಪಾರಾಗಲು ಯೋಚನೆ ಮಾಡಿದ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿದ್ದ ಮುಡಾ ಸೈಟ್ ವಾಪಸ್ ಮಾಡಿದ್ದಾರೆ. ಇದು ಜನಸ್ಪಂದನೆ ಇಲ್ಲದ ಸರ್ಕಾರವಾಗಿದ್ದು, ಐಸಿಯುನಲ್ಲಿದೆ. ಕೇವಲ ವಾಲ್ಮೀಕಿ ಮಾತ್ರವಲ್ಲ, ಎಲ್ಲ ನಿಗಮದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಅವರು ಉಜಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದ.ಕ.- ಉಡುಪಿ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಗ್ರಾ.ಪಂ. ಸದಸ್ಯರನ್ನು ಹೊಂದಿಲ್ಲ. ಆದರೆ ಹಣ ಬಲ ಮತ್ತು ಅಧಿಕಾರ ಬಲದಿಂದ ಏನಾದರೂ ಮಾಡಬಹುದೆಂದು ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ ನಾವೆಲ್ಲರೂ ಒಂದು ತಂಡವಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ನಡೆಸುವ ಮೂಲಕ ನಮ್ಮ ಗೆಲುವನ್ನು ಖಾತ್ರಿಗೊಳಿಸುವ ಕೆಲಸ ಮಾಡುತ್ತಿರುವುದಾಗಿ ಸಿ.ಟಿ. ರವಿ ಹೇಳಿದರು.
ರಾಜ್ಯ ಸರ್ಕಾರ ಕಮ್ಯೂನಲ್ ಮತ್ತು ಕ್ರಿಮಿನಲ್‌ಗಳಿಗೆ ಬೆಂಬಲಿಸುವ ಸರ್ಕಾರ. ೮ ವರ್ಷದ ಹಿಂದೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಮೇಲಿನ2000 ಹೆಚ್ಚು ಮೊಕದ್ದಮೆಗಳನ್ನ ವಾಪಸ್ ಪಡೆದ ಪರಿಣಾಮ ರಾಜ್ಯದಲ್ಲಿ 21 ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣವಾಯಿತು. ಈಗ ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣವನ್ನು ಕೂಡ ಹಿಂಪಡೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ.
ಈಗಾಗಲೇ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಸಿದ್ದೇವೆ. ಸಂಪುಟದಲ್ಲಿನ ನಿರ್ಣಯ ವಾಪಸು ಪಡೆಯಬೇಕೆಂದು ಆಗ್ರಹಿಸಿ ಚುನಾವಣೆ ಮುಗಿದ ತಕ್ಷಣ ಹುಬ್ಬಳಿ ಚಲೋ ನಡೆಸಲಿದ್ದೇವೆ, ಜತೆಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜ ಸಹಿತ ಜಿಲ್ಲೆ, ತಾಲೂಕಿನ ಸ್ಥಳೀಯ ಪ್ರಮುಖ ನಾಯಕರು ಇದ್ದರು.