ಸಕಲೇಶಪುರ ಪುರಸಭೆ ಹರಾಜಿನಲ್ಲಿ ಭ್ರಷ್ಟಾಚಾರ

| Published : Mar 16 2025, 01:49 AM IST

ಸಾರಾಂಶ

ಸಕಲೇಶಪುರ ಪುರಸಭೆಯ ಕೆಲವು ಸದಸ್ಯರು ಜನಸಾಮಾನ್ಯರ ಸಮಸ್ಯೆಯನ್ನು ಸರಿಪಡಿಸದೇ ಸರ್ಕಾರದ ಸುತ್ತೋಲೆಯನ್ನೇ ಧಿಕ್ಕರಿಸಿರುವುದು ಜಗಜ್ಜಾಹೀರಾತಾಗಿದೆ ಹಾಗೂ ಪುರಸಭೆಯ ಅಧಿಕಾರಿಗಳು ಅಲ್ಲಿನ ಸದಸ್ಯರು ಹಾಸನ ಜಿಲ್ಲಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಸದಸ್ಯರು ಪ್ರತಿನಿತ್ಯ ಸಾರ್ವಜನಿಕರಿಂದ ಹಣವನ್ನು ಪಡೆದು ಎಗ್ಗಿಲ್ಲದೆ ಬಕಪಕ್ಷಿಗಳಂತೆ ಸಾರ್ವಜನಿಕರ ರಕ್ತವನ್ನು ಹೀರುತ್ತಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರದ ಪುರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹರಾಜು ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ತಡೆದು ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸಕಲೇಶಪುರ ಪುರಸಭೆಯ ಕೆಲವು ಸದಸ್ಯರು ಜನಸಾಮಾನ್ಯರ ಸಮಸ್ಯೆಯನ್ನು ಸರಿಪಡಿಸದೇ ಸರ್ಕಾರದ ಸುತ್ತೋಲೆಯನ್ನೇ ಧಿಕ್ಕರಿಸಿರುವುದು ಜಗಜ್ಜಾಹೀರಾತಾಗಿದೆ ಹಾಗೂ ಪುರಸಭೆಯ ಅಧಿಕಾರಿಗಳು ಅಲ್ಲಿನ ಸದಸ್ಯರು ಹಾಸನ ಜಿಲ್ಲಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಸದಸ್ಯರು ಪ್ರತಿನಿತ್ಯ ಸಾರ್ವಜನಿಕರಿಂದ ಹಣವನ್ನು ಪಡೆದು ಎಗ್ಗಿಲ್ಲದೆ ಬಕಪಕ್ಷಿಗಳಂತೆ ಸಾರ್ವಜನಿಕರ ರಕ್ತವನ್ನು ಹೀರುತ್ತಿದ್ದಾರೆ ಎಂದರು.

ಪುರಸಭೆಯ ಮುಖ್ಯಾಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಪುರಸಭೆ ಸದಸ್ಯರ ಕೈಗೊಂಬೆಯಾಗಿದ್ದಾರೆ. ಉದಾಹರಣೆಗೆ ಹೇಮಾವತಿ ಸಂಕೀರ್ಣ ಭವನವನ್ನು ಇದರ ಆಯಸ್ಸು ಮುಗಿದಿದೆ ಎಂದು ಇದನ್ನು ಡೆಮಾಲಿಶ್ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ಇದರ ಎದುರಲ್ಲೆ ೧೯೮೨ರಲ್ಲಿ ಪುರಸಭೆಯವರು ವಾಣಿಜ್ಯ ಭವನ ಕಟ್ಟಡವನ್ನು ನಿರ್ಮಾಣ ಮಾಡಿ ೪೩ ವರ್ಷ ಕಳೆದಿದ್ದರೂ ಕೂಡ ಇದು ಶಿಥಲಾವಸ್ಥೆಗೆ ಬಂದಿರುವುದಿಲ್ಲ. ಆದರೆ ಹೇಮಾವತಿ ಸಂಕೀರ್ಣವು ೧೯೮೭ರಲ್ಲಿ ನಿರ್ಮಾಣವಾಗಿದ್ದು, ಇದರ ಕಾಲಾವಧಿ ಬರೀ ೩೮ ವರ್ಷ ಆಗಿರುತ್ತದೆ. ಆದರೆ ಇದು ಅಸ್ತಿತ್ವ ಕಳೆದುಕೊಂಡು ಬೀಳುವ ಹಂತಕ್ಕೆ ಬಂದಿದೆ ಎಂದು ಹಣ ಮಾಡುವ ಉದ್ದೇಶದಿಂದ ಸುಳ್ಳು ಹೇಳುತ್ತಿದ್ದಾರೆ. ಇದು ಹಣ ಮಾಡಲು ಹೊರಟಿರುವ ದಾರಿಯಾಗಿದೆ ಎಂದು ದೂರಿದರು.

ಪುರಸಭೆಯ ವ್ಯಾಪ್ತಿಗೆ ಒಳಪಟ್ಟಂತೆ ಸರಿ ಸುಮಾರು ೧೪೦ ವಾಣಿಜ್ಯ ಮಳಿಗೆಗಳು ಇದೆ. ಆದರೆ ಇದನ್ನು ಹರಾಜು ಮಾಡದೆ ಕೆಲವೊಂದು ವಾಣಿಜ್ಯ ಮಳಿಗೆಯನ್ನು ಹರಾಜು ಪ್ರಕ್ರಿಯೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ೧೪೦ ವಾಣಿಜ್ಯ ಮಳಿಗೆಗಳನ್ನು ಏಕಕಾಲದಲ್ಲಿ ಹರಾಜು ಮಾಡಬೇಕೆಂದು ಸಕಾರದ ಸುತ್ತೋಲೆಯಿದೆ. ಆದರೆ ಸಕಲೇಶಪುರ ಪುರಸಭೆಯ ಅಧಿಕಾರಿಗಳು ಮತ್ತು ಕೆಲವು ಸದಸ್ಯರು ಸೇರಿ ಭ್ರಷ್ಟಾಚಾರಕ್ಕೆ ಇಳಿದು ಹಣ ಲೂಟಿ ಮಾಡುವ ದಂಧೆಗೆ ಇಳಿದಿದ್ದಾರೆ. ಪದೇ ಪದೆ ಕಾನೂನುಗಳನ್ನು ಉಲ್ಲಂಘಿಸಿ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಕಾನೂನು ಬಾಹಿರವಾಗಿ ಹರಾಜು ಪ್ರಕ್ರಿಯೆ ನಡೆದಿದ್ದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ವಾಣಿಜ್ಯ ಮಳಿಗೆಯಲ್ಲಿರುವ ವರ್ತಕರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಮರಾಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗಳು ಅತೀ ಶೀಘ್ರವಾಗಿ ಮಧ್ಯಪ್ರವೇಶಿಸಿ ಸಕಲೇಶಪುರ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಈ ಹರಾಜು ಪ್ರಕ್ರಿಯೆಯನ್ನು ತಡೆದು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿ ಶ್ರೀ ರಾಮಸೇನೆಯ ಆಗ್ರಹವಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆ ಸಕಲೇಶಪುರ ತಾಲೂಕು ಅಧ್ಯಕ್ಷ ಉಮೇಶ್, ಸುರೇಶ್ ಆಳ್ವಾ, ಗಿರೀಶ್, ವಾಣಿಜ್ಯ ಮಳಿಗೆ ವರ್ತಕ ರಮೇಶ್ ಇತರರು ಉಪಸ್ಥಿತರಿದ್ದರು.