ಸಾರಾಂಶ
ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಶಾಲಾ ಮೈದಾನ ಸಮತಟ್ಟು ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಚಾಪೆತೋಟ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮೈದಾನ ಸಮತಟ್ಟು ಕಾಮಗಾರಿಗೆ 2021-22 ರಲ್ಲಿ ಸಮಾರು ₹ ೪ ಲಕ್ಷ ಕ್ರಿಯಾಯೋಜನೆ ಮಾಡಲಾಗಿತ್ತು. ಆದರೆ ಸುಮಾರು ₹೭೦ ಸಾವಿರ ಖರ್ಚಾಗಿದೆ. ಈ ಬಗ್ಗೆ ಮಾಹಿತಿ ಕೇಳಿದರೆ ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನ ಆಗಿಲ್ಲ. ಕಾಮಗಾರಿ ನಡೆದು ಪೂರ್ಣ ಬಿಲ್ ಆಗಿದ್ದರೂ ಕಾಮಗಾರಿ ನಡೆದೇ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಸರಿಯಾದ ಮಾಹಿತಿ ಕೊಡದೇ ಇದ್ದಾಗ ಈ ಬಗ್ಗೆ ಜಿಲ್ಲಾ ಒಂಬುಡ್ಸಮನ್ ಅವರಿಗೆ ದೂರಿದರೂ ಸರಿಯಾಗಿ ತನಿಖೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಂಬುಡ್ಸಮನ್ ತನಿಖೆಗೆ ಬಂದು ತಾಪಂ ಕಚೇರಿಯಲ್ಲಿ ಸಭೆ ಕರೆದಾಗ ಪಿಡಿಒ ಗೈರಾಗಿದ್ದರು. ಕಾಮಗಾರಿ ವಿಚಾರವಾಗಿ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ ತಾಪಂಗೆ ವರದಿ ನೀಡುವಂತೆ ನೊಟೀಸ್ ನೀಡಿದ್ದಾಗಿ ಹೇಳಿ ಜಾರಿಕೊಂಡರು. ಕಳೆದ ಜು.೫ ರಂದು ಮತ್ತೊಮ್ಮೆ ವಿಚಾರಣೆಗಾಗಿ ಕರೆದಾಗಲೂ ಪಿಡಿಒ ಹಾಜರಾಗಿಲ್ಲ. ಅಲ್ಲದೇ, ಜು.೩೧ ರಂದು ಸ್ಥಳ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ನಮ್ಮೊಂದಿಗೆ ಸಾಮಾಜಿಕ ಕಾರ್ಯಕರ್ತರ ಉಪಸ್ಥಿತಿಗೆ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನಿರಾಕರಿಸಿದ್ದರು. ಆದರೆ ಗ್ರಾಪಂ ಅಧ್ಯಕ್ಷರೊಂದಿಗೆ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ಕೆಲವರು ಬಂದಾಗ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ನಮಗೇ ಗರಂ ಆಗಿದ್ದಾರೆಂದು ದೂರಿದರು.
ಗ್ರಾಪಂ ಸದಸ್ಯ ವಿಶ್ವನಾಥ ಹಳೆಮನೆ ಮಾತನಾಡಿ, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ. ೨೫ ಕೂಲಿಗಳ ಹೆಸರು ಹಾಕಿ, ಬೇರೆ ೧೨-೧೩ ಜನರ ಖಾತೆಗಳಿಗೆ ಹಣ ಬಟವಡೆ ಮಾಡಲಾಗಿದೆ. ನಕಲಿ ಸಹಿ ಹಾಕಿರುವ ಅನುಮಾನವಿದೆ. ಕೆಲಸ ಮಾಡಿದ ಕೂಲಿಗಳೇ ಬೇರೆ, ಹಣ ಜಮಾ ಆಗಿರುವುದೇ ಬೇರೆಯವರ ಖಾತೆಗೆ. ಕಾಮಗಾರಿಯ ಮುಗಿದ ನಂತರ ಜಿಪಿಎಸ್ ಇಲ್ಲದ ಚಿತ್ರ ಅಂಟಿಸಿ ಬಿಲ್ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನೆಕರ್ ಮಾತನಾಡಿ, ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಜಿಲ್ಲಾ ಒಂಬುಡ್ಸಮನ್ ಸರಿಯಾದ ತನಿಖೆ ನಡೆಸಿಲ್ಲ. ಪಿಡಿಒ ಸರಿಯಾದ ಮಾಹಿತಿ ನೀಡಿಲ್ಲ. ಇವರ ವಿರುದ್ಧ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ದೂರು ನೀಡಲಾಗುವುದೆಂದು ತಿಳಿಸಿದರು.